ಉತ್ತಮ ಆರೋಗ್ಯಕ್ಕೆ ಪರಿಸರ ಸಂರಕ್ಷಿಸಿ: ಗಣೇಶ ನಾಯ್ಕ

| Published : Jun 08 2024, 12:36 AM IST

ಸಾರಾಂಶ

ಗಿಡ ನೆಟ್ಟು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.

ಭಟ್ಕಳ: ಪರಿಸರದ ಬಗ್ಗೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಉತ್ತಮ ಕಾಳಜಿ ವಹಿಸಿದ್ದಾರೆ. ಮುಂದಿನ ಪೀಳಿಗೆಯ ಆರೋಗ್ಯಕರ ಏಳಿಗೆಗಾಗಿ ಪರಿಸರ ಸಂರಕ್ಷಣೆ ಮುಖ್ಯವಾಗಿದೆ ಎಂದು ಯೋಜನಾಧಿಕಾರಿ ಗಣೇಶ ನಾಯ್ಕ ತಿಳಿಸಿದರು.

ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಿಡ ನೆಟ್ಟು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ಶಿರಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ದೈಮನೆ ಮಾತನಾಡಿ, ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳು ಪೋಷಣೆ ಮಾಡಬೇಕು. ಸಾಲುಮರದ ತಿಮ್ಮಕ್ಕ ಅವರ ಕಥೆ ಹೇಳುವ ಮೂಲಕ ಮಾಹಿತಿ ನೀಡಿದರು. ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ಮಾತನಾಡಿ, ಪರಿಸರ ಸಮೃದ್ಧವಾಗಿ ಶುದ್ಧವಾಗಿ ಇರಬೇಕಾದರೆ ಪರಿಶುದ್ಧವಾದ ಗಾಳಿ ಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಸಲಹಬೇಕು ಎಂದರು.

ಮುಖ್ಯಶಿಕ್ಷಕ ಎ.ಬಿ. ಮಡಿವಾಳ್ ಪರಿಸರಕ್ಕೆ ಸಂಬಂಧಿಸಿದ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಪ್ರಬಂಧ ಚಟುವಟಿಕೆ ನಡೆಸಿ, ಬಹುಮಾನ ವಿತರಿಸಲಾಯಿತು. ನಂತರದಲ್ಲಿ ಶಾಲೆಯ ಸುತ್ತ ಗಿಡ ನಾಟಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಕಮಿಟಿ ಸದಸ್ಯರು, ಸ್ಥಳಿಯ ಒಕ್ಕೂಟದ ಅಧ್ಯಕ್ಷರು, ಸಹ ಶಿಕ್ಷಕರು, ಶೌರ್ಯ ವಿಪತ್ತು ತಂಡದ ಕ್ಯಾಪ್ಟನ್ ಮತ್ತು ಸ್ವಯಂ ಸೇವಕರು, ಗ್ರಾಮ ಪಂಚಾಯಿತಿ ಸದಸ್ಯರು, ವಲಯದ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಅಳ್ವೆಕೊಡಿ ಸಣಬಾವಿ ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.ಬಾರೆ ಶಾಲೆಯಲ್ಲಿ ವನಮಹೋತ್ಸವ

ಯಲ್ಲಾಪುರ: ತಾಲೂಕಿನ ಮಾವಿನಮನೆ ಗ್ರಾಪಂ ವ್ಯಾಪ್ತಿಯ ಬಾರೆಯ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ಮಾವಿನಮನೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದವರಿಂದ ವನಮಹೋತ್ಸವ ಹಾಗೂ ಪರಿಸರ ಸ್ವಚ್ಛತಾ ಕಾರ್ಯಕ್ರಮ ಜೂ. ೭ರಂದು ಜರುಗಿತು.ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ವಿಷಯದ ಕುರಿತು ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ, ಬಹುಮಾನಗಳನ್ನು ವಿತರಿಸಲಾಯಿತು.ತಂಡದ ಪ್ರಮುಖರಾದ ರಾಘವೇಂದ್ರ, ಗಣಪತಿ ವಿ., ಯಮುನಾ, ನಾಗರತ್ನ, ಪಾರ್ವತಿ, ಮಂಜುನಾಥ, ಗಣಪತಿ ಕುಣಬಿ, ಈಶ್ವರ, ರಾಮಕೃಷ್ಣ ಹೆಗಡೆ, ಶಿವರಾಮ ಭಾಗವಹಿಸಿದ್ದರು. ಬಾರೆ ಶಾಲೆಯ ಮುಖ್ಯಾಧ್ಯಾಪಕ ಗಣಪತಿ ಪಟಗಾರ ಮಾತನಾಡಿದರು. ಗ್ರಾಮಾಭಿವೃದ್ಧಿಯ ಸೇವಾನಿರತೆ ರಾಜೇಶ್ವರಿ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಮೋತಿಲಾಲ್ ವಂದಿಸಿದರು.