ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಜ್ಞಾನಬಂಧು ಶಾಲೆಯಲ್ಲಿ ಡಿ.ರಾಜೇಗೌಡರ ಸ್ಮರಣಾರ್ಥ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರಿನ ಅಧ್ಯಯನ್ ಕ್ರಿಕೆಟ್ ಅಕಾಡೆಮಿ ತಂಡ ಪ್ರಥಮ ಸ್ಥಾನ ಗಳಿಸಿ ಟ್ರೋಫಿ ಪಡೆದುಕೊಂಡಿದೆ.ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಸಮೀಪದ ಜ್ಞಾನಬಂಧು ವಿದ್ಯಾಸಂಸ್ಥೆಯಿಂದ ಶಾಲೆ ಸಂಸ್ಥಾಪಕ ಎಂ.ಆರ್. ಕುಮಾರಸ್ವಾಮಿ ನೇತೃತ್ವದಲ್ಲಿ ತಂದೆ ದಿ.ಡಿ.ರಾಜೇಗೌಡರ ಡಿಆರ್‌ಜಿ ಸ್ಮರಣಾರ್ಥ 14 ವರ್ಷ ವಯೋಮಿತಿಯ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಶಾಲೆ ಕ್ರೀಡಾಂಗಣದಲ್ಲಿ ನಡೆದು ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರಿಕೆಟ್ ಅಕಾಡೆಮಿಗಳಿಂದ ಕ್ರಿಕೆಟ್ ತಂಡಗಳು ಪಾಲ್ಗೊಂಡಿದ್ದವು. ಲೀಗ್ ಪಂದ್ಯಗಳ ಮೂಲಕ ಫೈನಲ್ ಪಂದ್ಯಾವಳಿ ನಡೆಯಿತು.
ಫೈನಲ್ ಪಂದ್ಯದಲ್ಲಿ ಮೈಸೂರಿನ ಅಧ್ಯಯನ್ ಕ್ರಿಕೆಟ್ ಅಕಾಡೆಮಿ ತಂಡ ಗೆಲುವು ಸಾಧಿಸಿ ಡಿಆರ್ ಜಿ ಪದಕ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಮೈಸೂರಿನ ಫ್ಯೂಚರ್ ಕ್ರಿಕೆಟ್ ಅಕಾಡೆಮಿ ತಂಡ ಪಡೆದುಕೊಂಡಿತು.ಜ್ಞಾನಬಂಧು ಶಾಲೆ ಸಂಸ್ಥಾಪಕ ಅಧ್ಯಕ್ಷ ಎಂ.ಆರ್.ಕುಮಾರಸ್ವಾಮಿ, ಮೈಸೂರಿನ ಪೊಲೀಸ್ ಇನ್ಸ್ ಪೆಕ್ಟರ್ ಯೋಗೇಶ್, ಕ್ರಿಕೇಟರ್ ಸಪ್ತಗಿರೀಶ್ ಸೇರಿದಂತೆ ಗಣ್ಯರಿಂದ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ತಂಡಗಳಿಗೆ ಟ್ರೋಫಿ ಹಾಗೂ ಪದಕ ವಿತರಿಸಿದರು.
ಫೈನಲ್ ಪಂದ್ಯವನ್ನು ಎಂ.ಆರ್.ಕುಮಾರಸ್ವಾಮಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಕ್ರಿಕೆಟ್ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಆಟಗಾರರು, ಪೋಷಕರಿಗೆ, ತರಬೇತುದಾರರಿಗೆ ಜ್ಞಾನಬಂಧು ಶಾಲೆಯಲ್ಲೇ ವಾಸ್ತವ್ಯ, ಊಟದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿತ್ತು.ಈ ವೇಳೆ ಎಂ.ಆರ್.ಕುಮಾರಸ್ವಾಮಿ ಮಾತನಾಡಿ, ನನ್ನ ತಂದೆ ಡಿ.ರಾಜೇಗೌಡರ ಸ್ಮರಣಾರ್ಥ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಗಿದೆ. ಪ್ರತಿವರ್ಷವೂ ನನ್ಮ ತಂದೆ ಹೆಸರಿನಲ್ಲಿ ಕ್ರೀಡೆ, ಶಿಕ್ಷಣ ಹಾಗೂ ಸಮಾಜಸೇವೆ ಸಲ್ಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.