ಬತ್ತಿದ ಭೂತನಾಳ ಕೆರೆ; ಉಲ್ಬಣಿಸಿದ ನೀರಿನ ಹಾಹಾಕಾರ

| Published : Feb 19 2024, 01:32 AM IST

ಬತ್ತಿದ ಭೂತನಾಳ ಕೆರೆ; ಉಲ್ಬಣಿಸಿದ ನೀರಿನ ಹಾಹಾಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ವರುಣದೇವ ಮುನಿಸಿಕೊಂಡಿದ್ದರಿಂದ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ನಗರ ಹೊರವಲಯದ ಐತಿಹಾಸಿಕ ಭೂತನಾಳ ಕೆರೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಖಾಲಿಯಾಗಿರುವುದರಿಂದ 35 ವಾರ್ಡ್‌ನಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಈ ಹಿಂದೆ ನಾಲ್ಕು ದಿನಕ್ಕೊಮ್ಮೆ ಬರುತ್ತಿದ್ದ ನೀರು ಈಗ ಎಂಟು ದಿನಕ್ಕೆ ವಿಸ್ತರಣೆಯಾಗಿದೆ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಮಾತ್ರ 12 ದಿನವಾದ್ರೂ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಬಾರಿ ವರುಣದೇವ ಮುನಿಸಿಕೊಂಡಿದ್ದರಿಂದ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ನಗರ ಹೊರವಲಯದ ಐತಿಹಾಸಿಕ ಭೂತನಾಳ ಕೆರೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಖಾಲಿಯಾಗಿರುವುದರಿಂದ 35 ವಾರ್ಡ್‌ನಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಈ ಹಿಂದೆ ನಾಲ್ಕು ದಿನಕ್ಕೊಮ್ಮೆ ಬರುತ್ತಿದ್ದ ನೀರು ಈಗ ಎಂಟು ದಿನಕ್ಕೆ ವಿಸ್ತರಣೆಯಾಗಿದೆ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಮಾತ್ರ 12 ದಿನವಾದ್ರೂ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ.

10 ದಿನಕ್ಕೊಮ್ಮೆ ನೀರು:

ಈ ಹಿಂದೆ ನಾಲ್ಕು ದಿನಕ್ಕೊಮ್ಮೆ ನೀರು ಬರುತ್ತಿದ್ದುದರಿಂದ ನಾಗರಿಕರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿರಲಿಲ್ಲ. ಆದ್ರೆ ಈಗ ವಾರಕ್ಕೊಮ್ಮೆ, 10 ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ಬಡವರು, ಮಹಿಳೆಯರಿಗೆ ಸಮಸ್ಯೆ. ನೀರು ಹಿಡಿಯುವುದಕ್ಕಾಗಿ ಮಹಿಳೆಯರು ಕೆಲಸಕ್ಕೆ ಹೋಗದೆ ಬಿಂದಿಗೆಳನ್ನ ಹಿಡಿದು ಕಾಯುತ್ತ ನಿಲ್ಲಬೇಕು. ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳಿಗೆ ಇದು ದೊಡ್ಡ ಸಂಕಷ್ಟವಾಗಿದೆ.

ಯಾವಾಗಂದ್ರೆ ಆಗ ನೀರು:

ಕಳೆದ ಒಂದು ವಾರದಿಂದ ನಗರದ ಹಲವು ವಾರ್ಡ್ ಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಯಾವಾಗಂದ್ರೆ ಆಗ ನೀರು ಬಿಡಲಾಗುತ್ತಿದೆ. ನೀರು ಬಿಟ್ಟರೂ ಸಹ ಏರಿಯಾದ ಜನತೆಗೆ ಮೊದಲಿನಂತೆ ಬಿಡುತ್ತಿಲ್ಲ. ಹಾಗಾಗಿ ಸರಿಯಾಗಿ ಊಟ, ನಿದ್ರೆಯನ್ನೂ ಮಾಡದೆ ನೀರಿಗಾಗಿ ನಿರಂತರ ಕಾಯುವ ಸ್ಥಿತಿ ವಿಜಯಪುರ ನಗರದ ಜನತೆಗೆ ಬಂದಿದೆ.

ಆಡಿಯೋ ಕೇಳಿ ಶಾಕ್:

ಕರ್ನಾಟಕ ಜಲಮಂಡಳಿ ಮತ್ತು ಮಹಾನಗರ ಪಾಲಿಕೆಯಿಂದ 2ನಿಮಿಷ 51ಸೆಕೆಂಡ್ ನ ಆಡಿಯೋ ಮಾಡಿ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ಎಲ್ಲೆಡೆ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಆ ಆಡಿಯೋ ಜನತೆಯ ನಿದ್ದೆಗೆಡಿಸಿದೆ‌‌‌. ಭೂತನಾಳ ಕೆರೆ ಬತ್ತಿರುವುದರಿಂದ ಎಂಟು ದಿನಕ್ಕೊಮ್ಮೆ ನೀರು ಬಿಡುವದಾಗಿ, ಯಾರೂ ನೀರು ಪೋಲು ಮಾಡದಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಈ ಪ್ರಕರಣೆಯಿಂದಾಗಿ ಜನರು ಮುಂದೆ ಹೇಗೆ ಎಂಬ ಶಾಕ್ ಗೆ ಒಳಗಾಗಿದ್ದಾರೆ. ನೀರಿನ ದುರುಪಯೋಗ ಕಂಡುಬಂದಲ್ಲಿ ನಲ್ಲಿ ಸಂಪರ್ಕ ಕಡಿತಗೊಳಿಸಿ ದಂಡ ವಿಧಿಸಲಾಗುವುದು. ಅನಧಿಕೃತ ಸಂಪರ್ಕ ಪಡೆದಿದ್ದರೆ ಅಧಿಕೃತ ಮಾಡಿಕೊಳ್ಳಬೇಕು, ಇಲ್ಲದಿದ್ರೆ ಭಾರೀ ದಂಡ ವಿಧಿಸಲಾಗುವುದು. ನೀರು ಪೋಲಾಗುತ್ತಿದ್ರೆ ಅಥವಾ ನೀರಿನ ವಿಚಾರಕ್ಕೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ 9071423510 ಮತ್ತು 9364008060 ಸಂಪರ್ಕಿಸುವಂತೆ ಅಥವಾ ಬಡಿಕಮಾನ್ ಬಳಿ ಜಲಮಂಡಳಿ ಕಚೇರಿಗೆ ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

ಸ್ಪಂದನೆ ಮುಖ್ಯ:

ಬೇಸಿಗೆ ಪ್ರಾರಂಭದಲ್ಲೇ ಹೀಗಾದ್ರೆ ಮುಂದೆ ಏಪ್ರಿಲ್ -ಮೇ ತಿಂಗಳಲ್ಲಿ ಪರಿಸ್ಥಿತಿ ಹೇಗೋ ಏನೋ ಎಂಬ ಚಿಂತೆ ಎಲ್ಲರಲ್ಲೂ ಶುರುವಾಗಿದೆ. ಹೀಗಾಗಿ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಮೇಯರ್, ಉಪಮೇಯರ್ ಸೇರಿದಂತೆ ಪಾಲಿಕೆ ಎಲ್ಲ ಸದಸ್ಯರು ತಮ್ಮ ತಮ್ಮ ವಾರ್ಡ್ ಗಳಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ.

ಸಚಿವ, ಶಾಸಕರ ಅಭಯಹಸ್ತ:

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದಂತೆ ಎಚ್ಚೆತ್ತ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನಗರದ 4,5,6,10 ಹಾಗೂ 12ನೇ ವಾರ್ಡ್ ಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಕೆ ಬಿ ಜೆ ಎನ್ ಎಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಸ್ವತಹ ಭೂತನಾಳ ಕೆರೆಗೆ ಭೇಟಿ ನೀಡಿ ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅಕ್ವಾಡೆಕ್ಟ್ ನಿಂದ ಭೂತನಾಳ ಕೆರೆಗೆ ನೀರು ಹರಿಸುವ ಕೆಲಸ ಆರಂಭಿಸಿದ್ದು ಮೂರು ದಿನಗಳಲ್ಲಿ ಕೆಲಸ ಪುರ್ಣಗೊಳಿಸಿ, ಕೆರೆಗೆ ನೀರು ಹರಿಸಬೇಕು. ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

---ಬಾಕ್ಸ್‌ಇಷ್ಟೊಂದು ಬತ್ತಿದ್ದು ಇದೇ ಮೊದಲು

ಆದಿಲ್ ಶಾಹಿಗಳ ಕಾಲದಿಂದಲೂ 120 ಎಕರೆ ಪ್ರದೇಶದಲ್ಲಿರುವ ಭೂತನಾಳ ಕೆರೆ ಇಷ್ಟೊಂದು ಪ್ರಮಾಣದಲ್ಲಿ ಯಾವಾಗಲು ಬತ್ತಿಲ್ಲವಂತೆ. ನಗರದ ಜನತೆಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಕೆರೆ ಈಗ ಖಾಲಿಯಾಗಿದೆ. ಕೆರೆಯ ನೀರು ಸಂಗ್ರಹಿಸುವ ವೀಸ್ತಿರ್ಣ: 120 ಎಕರೆ, ಸಂಗ್ರಹವಾಗುವ ಒಟ್ಟು ನೀರಿನ ಪ್ರಮಾಣ: 18.9ಅಡಿ ಎತ್ತರ, ಪ್ರಸ್ತುತ ಇರುವ ನೀರಿನ ಪ್ರಮಾಣ: 3.5 ಅಡಿ ಎತ್ತರ, ಕಳೆದ ವರ್ಷ ಈ ದಿನದಲ್ಲಿದ್ದ ನೀರಿನ ಪ್ರಮಾಣ: 9 ಅಡಿ ಎತ್ತರ ಆಗಿತ್ತು.---

ಕೋಟ್

ಮೊದಲಿಗೆ ವಾರಕ್ಕೊಮ್ಮೆ ಬರ್ತಿದ್ದ ನೀರು ಇದೀಗ 12ದಿನಕ್ಕೊಮ್ಮೆ ಬರುತ್ತಿದೆ, ನೀರಿಗಾಗಿ ಎಲ್ಲ ಕೆಸಲ ಬಿಟ್ಟು ನಿಲ್ಲುವಂತಾಗಿದೆ. ಜಲಮಂಡಳಿ ಹೊರಡಿಸಿದ ಆಡಿಯೋ ಕೇಳಿ ನಮಗೆ ಮುಂಬರುವ ದಿನಗಳಲ್ಲಿ ನೀರು ಸಿಗುತ್ತದೋ ಇಲ್ಲವೋ ಎಂಬ ಆತಂಕ ಶುರುವಾಗಿದೆ.

-ಶಿವಕುಮಾರ ಪಾಟೀಲ್, ನಗರದ ನಿವಾಸಿ.

---

ಬೇಸಿಗೆ ಆರಂಭದಲ್ಲಿ ನೀರಿನ ಸಮಸ್ಯೆ ಎದುರಾಗಿದೆ, ಹೀಗಾಗಿ ಜಲಮಂಡಳಿ, ಮಹಾನಗರ ಪಾಲಿಕೆ ಹಾಗೂ ಕೆ ಬಿ ಜೆ ಎನ್ ಎಲ್ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಸಭೆ ನಡೆಸಿ ತಕ್ಷಣದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಯೋಚಿಸಲಾಗಿದೆ. ಭೂತನಾಳ ಕೆರೆಗೆ ನೀರು ಬಿಡುವ ಪ್ಲಾನ್ ಮಾಡಿದ್ದು, ಕಾಮಗಾರಿ ಮುಗಿದ ತಕ್ಷಣ ನೀರು ಹರಿಸಿ ಕೆರೆ ತುಂಬಿಸಲಾಗುತ್ತದೆ. ಜೊತೆಗೆ ನಗರದಲ್ಲಿರುವ ಐತಿಹಾಸಿಕ ಬಾವಿಗಳು, ಬೋರವೆಲ್ ಗಳನ್ನು ಬಳಸಿಕೊಂಡು ಬೇಸಿಗೆ ನೀರಿನ ಬವಣೆ ನೀಗಿಸಲಾಗುವುದು.

-ಎಂ.ಬಿ.ಪಾಟೀಲ್, ಉಸ್ತುವಾರಿ ಸಚಿವ.