ಬಾಗಲಗುಂಟೆಯಲ್ಲಿ ಅದ್ಧೂರಿ ಶ್ರೀನಿವಾಸ ಕಲ್ಯಾಣ

| Published : Feb 19 2024, 01:32 AM IST / Updated: Feb 19 2024, 12:41 PM IST

Temple

ಸಾರಾಂಶ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ದೇವತಾ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್.ಮುನಿರಾಜು ತಿಳಿಸಿದರು. ಬಾಗಲಗುಂಟೆಯಲ್ಲಿ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಭಕ್ತ ಗಣವನ್ನು ಒಳ್ಳೆಯ ಮಾರ್ಗದಲ್ಲಿ ಕರೆದೊಯ್ದು ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಧಾರ್ಮಿಕ ಕೈಕಂರ್ಯಗಳು ಸಹಕಾರಿಯಾಗಿವೆ. ಜನರ ಅಪೇಕ್ಷೆಯಂತೆ ಮತ್ತು ಭಗವಂತನ ಪ್ರೇರಣೆಯಂತೆ ಲೋಕಕಲ್ಯಾಣಕ್ಕಾಗಿ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣ ಆಯೋಜಿಸಿದ್ದೇವೆ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.

ಬಾಗಲಗುಂಟೆ ಎಂಇಐ ಆಟದ ಮೈದಾನದಲ್ಲಿ ಶ್ರೀವಾರಿ ಫೌಂಡೇಶನ್ ಸಹಯೋಗದೊಂದಿಗೆ, ಸೂರಜ್ ಫೌಂಡೇಶನ್ ವತಿಯಿಂದ ಶಾಸಕ ಎಸ್.ಮುನಿರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಮಾತನಾಡಿದರು.

ಸದಾ ಲೌಕಿಕದಲ್ಲಿ ಕಳೆದುಹೋಗುವ ಜನತೆ ಸತ್ಸಂಗ, ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು, ದೇವರ ಆರಾಧನೆ, ಹೋಮ, ಹವನ ಧಾರ್ಮಿಕ ಆಚರಣೆ ಸಹಕಾರಿಯಾಗಿ ಸಮಾಜ ಸುಭಿಕ್ಷವಾಗುತ್ತದೆ ಎಂದರು.

ಶ್ರೀನಿವಾಸ ಕಲ್ಯಾಣ ನೆಪ ಮಾತ್ರ, ಲೋಕ ಕಲ್ಯಾಣವಾಗಲಿ, ಸಕಲ ಜೀವರಾಶಿಗೂ ಒಳಿತಗಾಲಿ ಎಂಬುದೇ ಶ್ರೀನಿವಾಸ ಕಲ್ಯಾಣೋತ್ಸವದ ಉದಾತ್ತ ಉದ್ದೇಶ. ಎಲ್ಲಾ ಶಾಸಕರು ಕೂಡ ಇದೇ ತರಹ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡರೆ ಕಾಲ-ಕಾಲಕ್ಕೆ ಮಳೆ ಬೆಳೆಯಾಗಿ ಜನರು ಸುಭಿಕ್ಷವಾಗಿರುತ್ತಾರೆ ಎಂದು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಹಾರೈಸಿದರು.

ಪ್ರತಿಫಲವನ್ನು ಅಪೇಕ್ಷಿಸದೆ ನಿಷ್ಠೆಯಿಂದ ಕಾಯಕ ಮಾಡುವವರಿಗೆ ದೇವರು ಸದಾ ಕಾಯುತ್ತಾನೆ. ಆದುದರಿಂದ ಸಮಾಜಮುಖಿಯಾಗಿ ಇತರರಿಗೆ ಒಳ್ಳೆಯದನ್ನು ಬಯಸಬೇಕು ಎಂದು ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತಾ ಎಸ್.ಮುನಿರಾಜು ತಿಳಿಸಿದರು.

ಕಲ್ಯಾಣೋತ್ಸವದಲ್ಲಿ ತಿರುಪತಿ ಮಾದರಿಯಲ್ಲಿ ನಿರ್ಮಾಣವಾಗಿದ್ದ ಬೃಹತ್ ವೇದಿಕೆಯಲ್ಲಿ ಆಭರಣಗಳಿಂದ ಅಲಂಕೃತರಾಗಿ ವಿರಾಜಮಾನರಾಗಿದ್ದ ಭಗವಾನ್ ಶ್ರೀನಿವಾಸ ಹಾಗೂ ಶ್ರೀದೇವಿ ಮತ್ತು ಭೂದೇವಿಯರ ದೈವಿಕ ದೃಶ್ಯ ವೈಕುಂಠವನ್ನೇ ಧರೆಗಿಳಿಸಿದಂತಿತ್ತು. ಅರ್ಚಕರು ಮಂತ್ರಗಳನ್ನು ಪಠಿಸುತ್ತಾ ಧಾರ್ಮಿಕ ವಿಧಿ ವಿಧಾನ, ಸೇವಾ ಕಾರ್ಯಗಳನ್ನು ನೆರವೇರಿಸಿದರು. ವೆಂಕಟೇಶ್ ಹಾಗೂ ತಂಡದವರು ಗೋವಿಂದನ ಕೀರ್ತನೆ, ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ನೆರಿದಿದ್ದ ಭಕ್ತರನ್ನು ಸಂಪ್ರೀತಿಗೊಳಿಸಿದರು.

ಕಲ್ಯಾಣೋತ್ಸವದಲ್ಲಿ ಮಾಂಗಲ್ಯ ಧಾರಣೆ, ಮಂತ್ರಾಕ್ಷತೆ ನೆರವೇರಿತು. ಸುಮಾರು 20 ಸಾವಿರ ತಿರುಪತಿ ಲಡ್ಡು ಹಾಗೂ ಪ್ರಸಾದ ವಿತರಿಸಲಾಯಿತು.

ಮುಖಂಡರಾದ ಅನಿಲ್ ಗುರು ನಿಶ್ಚಲ್, ಸ್ವಪ್ನ, ರೇಷ್ಮಾ, ಬಿಜೆಪಿ ಮುಖಂಡರು ಕಾರ್ಯಕರ್ತರು, ಸ್ಥಳೀಯರು ಸಾರ್ವಜನಿಕರು ಉಪಸ್ಥಿತರಿದ್ದರು.