ಸಾರಾಂಶ
ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಮದ್ಯ ಸೇವಿಸಿ ವಾಹನ ಚಲಾಯಿಸುವುದು ಮತ್ತು ಅಪಘಾತಗಳ ಸಂಖ್ಯೆ ಜಾಸ್ತಿಯಾಗಿರುವುದು ಕೂಡ ಕಂಡಿಬಂದಿದೆ. ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ಮದ್ಯಪಾನ ಮಾಡುವುದು ಸಾರ್ವಜನಿಕರ ದೂರಿನ ಮೇರೆಗೆ ಇಲಾಖೆ ಗಮನಕ್ಕೆ ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಕಾರ್ಯಾಚರಣೆ ನಡೆಸಿದ್ದಾಗಿ ಕೊಡಗು ಎಸ್ಪಿ ರಾಮರಾಜನ್ ಮಾಹಿತಿ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಮಂಗಳವಾರ ರಾತ್ರಿ ರಸ್ತೆಗಿಳಿದ ಸಂಚಾರಿ ಪೊಲೀಸರು ವಿರಾಜಪೇಟೆ ರಸ್ತೆಯಲ್ಲಿ ತೆರಳುವ ವಾಹನಗಳನ್ನು ತಡೆದು ಮದ್ಯ ಸೇವಿಸಿ ವಾಹನ ಚಲಾಯಿಸಿದ ಹಲವು ಚಾಲಕರ ಮೇಲೆ ದಂಡ ವಿಧಿಸಿದ್ದಾರೆ. ಜಿಲ್ಲೆಯಲ್ಲಿ ಮದ್ಯ ಸೇವನೆಯಿಂದ ಅಫಘಾತವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಮದ್ಯ ಸೇವಿಸಿ ವಾಹನ ಚಲಾಯಿಸುವುದು ಮತ್ತು ಅಪಘಾತಗಳ ಸಂಖ್ಯೆ ಜಾಸ್ತಿಯಾಗಿರುವುದು ಕೂಡ ಕಂಡಿಬಂದಿದೆ. ಅಲ್ಲದೆ ದ್ವೀಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುವುದು ಪಾದಚಾರಿಗಳ ಮೇಲೆ ವಾಹನ ಹರಿಯಬಿಡಲು ಪ್ರಯತ್ನಿಸುವುದು ಮತ್ತು ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ಮದ್ಯಪಾನ ಮಾಡುವುದು ಸಾರ್ವಜನಿಕರ ದೂರಿನ ಮೇರೆಗೆ ಇಲಾಖೆ ಗಮನಕ್ಕೆ ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ರಾತ್ರಿ ವೇಳೆ ಮದ್ಯಪಾನ ಸೇವಿಸಿ ವಾಹನ ಚಲಾಯಿಸುವ ಚಾಲಕರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಕೊಡಗು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ:
ವಿರಾಜಪೇಟೆ ವಿಭಾಗದ ತಿತಿಮತಿ ವಲಯದ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಎಲಿಕಲ್ ಎಸ್ಟೇಟ್‌ಗೆ (ಬಿಬಿಟಿಸಿ) ಒಳಪಡುವ ಬಾಡಗ ಬಾಣಂಗಾಲ ಕಾಫಿ ಎಸ್ಟೇಟ್ ಹಾಗೂ ಸುತ್ತಮುತ್ತಲಿನ ತೋಟಗಳಲ್ಲಿ ಇರುವ 3 ಕಾಡಾನೆಗಳನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಮಂಗಳವಾರ ಪ್ರಾರಂಭವಾಗಿದೆ. ಆದ್ದರಿಂದ ಬಾಡಗ ಬಾಣಂಗಾಲ, ಕೊಡಗು ಶ್ರೀರಂಗಪಟ್ಟಣ, ಮೇಕೂರು ಹೊಸ್ಕೇರಿ, ಮಾಲ್ದಾರೆ, ಚೆನ್ನಯ್ಯನಕೋಟೆ, ಕರಡಿಗೋಡು, ಪುಲಿಯೇರಿ, ಹೊಸೂರು ಮತ್ತು ಇಂಜಿಲಗೆರೆ ಗ್ರಾಮಗಳ ಸಾರ್ವಜನಿಕರು, ತೋಟದ ಮಾಲಿಕರು, ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಜಾಗರೂಕತೆಯಿಂದ ಇರುವಂತೆ ಹಾಗೂ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಾರ್ಯಾಚರಣೆ ಪೂರ್ಣಗೊಳಿಸಲು ಸಹಕಾರ ನೀಡುವಂತೆ ಕೋರಿದೆ.ವಲಯ ಅರಣ್ಯಾಧಿಕಾರಿ ತಿತಿಮತಿ ವಲಯ ದೂ.ಸಂ. 7483920018, ಉಪ ವಲಯ ಅರಣ್ಯಾಧಿಕಾರಿ, ಚೆನ್ನಂಗಿ ಉಪ ವಲಯ 9901242528 ನ್ನು ಸಂಪರ್ಕಿಸಬಹುದು ಎಂದು ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.