ಸರ್ಕಾರಿ ಅಡುಗೆ ಸಿಬ್ಬಂದಿ ಸರೋಜಮ್ಮ ಅವರು ವಸತಿ ನಿಲಯದೊಳಗೆ ಮದ್ಯಪಾನ ಮಾಡಿ, ಹಾಡುಗಳನ್ನು ಹಾಕಿಕೊಂಡು ವಿಕಾರವಾಗಿ ನೃತ್ಯ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು.

ಕನ್ನಡಪ್ರಭ ವಾರ್ತೆ ಚೇಳೂರು ತಾಲೂಕಿನ ಚಾಕವೇಲು ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಸಿಬ್ಬಂದಿಯೊಬ್ಬರು ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಈಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಗಂಭೀರ ಘಟನೆಯಲ್ಲಿ ಕೇವಲ ಕೆಳಹಂತದ ಸಿಬ್ಬಂದಿಯ ಮೇಲೆ ಕ್ರಮ ಕೈಗೊಂಡು, ಘಟನೆಗೆ ನೇರ ಹೊಣೆಯಾದ ತಾಲೂಕು ಅಧಿಕಾರಿಗಳನ್ನು ರಕ್ಷಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಕುಡಿದು ಕುಪ್ಪಳಿಸಿದ ಸಿಬ್ಬಂದಿ:

ಸರ್ಕಾರಿ ಅಡುಗೆ ಸಿಬ್ಬಂದಿ ಸರೋಜಮ್ಮ ಅವರು ವಸತಿ ನಿಲಯದೊಳಗೆ ಮದ್ಯಪಾನ ಮಾಡಿ, ಹಾಡುಗಳನ್ನು ಹಾಕಿಕೊಂಡು ವಿಕಾರವಾಗಿ ನೃತ್ಯ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ಬಗ್ಗೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ (ಡಿಡಿ) ತೇಜನಂದ ರೆಡ್ಡಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಿಬ್ಬಂದಿ ಸರೋಜಮ್ಮ ಅವರು ಮದ್ಯಪಾನ ಮಾಡಿ ಶಿಸ್ತು ಉಲ್ಲಂಘಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಇಂತಹ ನೀಚ ಕೃತ್ಯವನ್ನು ಇಲಾಖೆ ಸಹಿಸುವುದಿಲ್ಲ. ಕೂಡಲೇ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕೃತ ಹೇಳಿಕೆ ನೀಡಿದ್ದಾರೆ.ತಾಲೂಕು ಅಧಿಕಾರಿಗಳ ಸಮ್ಮುಖದಲ್ಲೇ ತಪಾಸಣೆ:

ಡಿಡಿ ತೇಜನಂದ ರೆಡ್ಡಿ ಅವರು ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಂಜುಳಾ, ಮ್ಯಾನೇಜರ್ ನಾಗರಾಜು ಹಾಗೂ ವಸತಿ ನಿಲಯದ ಮೇಲ್ವಿಚಾರಕಿ ಸರಸ್ವತಮ್ಮ ಉಪಸ್ಥಿತರಿದ್ದರು. ಇವರೆಲ್ಲರ ಸಮ್ಮುಖದಲ್ಲೇ ವಿಡಿಯೋದಲ್ಲಿನ ಅಂಶಗಳು ಮತ್ತು ಸಿಬ್ಬಂದಿಯ ಕರ್ತವ್ಯ ಲೋಪ ಸಾಬೀತಾಗಿದೆ. ಆದರೂ, ಘಟನೆಯ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದ ಈ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ನಡೆಯನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ತಾಲೂಕು ಕಲ್ಯಾಣಾಧಿಕಾರಿಗಳ ಅಮಾನತಿಗೆ ಕಠಿಣ ಆಗ್ರಹ:

ವಸತಿ ನಿಲಯದಲ್ಲಿ ಇಷ್ಟೆಲ್ಲಾ ಅನಾಚಾರ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮಂಜುಳಾ ಮತ್ತು ಸಿಬ್ಬಂದಿ ವರ್ಗದವರೇ ಈ ದುರ್ವ್ಯವಸ್ಥೆಗೆ ನೇರ ಹೊಣೆ. ಕೇವಲ ಅಡುಗೆ ಸಿಬ್ಬಂದಿಯನ್ನು ಬಲಿಪಶು ಮಾಡಿ ದೊಡ್ಡ ಅಧಿಕಾರಿಗಳನ್ನು ರಕ್ಷಿಸುವುದು ಸರಿಯಲ್ಲ. ಸರಿಯಾದ ಮೇಲ್ವಿಚಾರಣೆ ನಡೆಸದ ತಾಲೂಕು ಕಲ್ಯಾಣಾಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ಸ್ಥಳೀಯರು ಕಟುವಾಗಿ ಆಗ್ರಹಿಸಿದ್ದಾರೆ.ಜನರ ಎಚ್ಚರಿಕೆ:

ಬಾಲಕಿಯರ ಸುರಕ್ಷತೆ ಮತ್ತು ಶಿಸ್ತಿನ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಿರುವ ತಾಲೂಕು ಆಡಳಿತ ವ್ಯವಸ್ಥೆಯ ವಿರುದ್ಧ ಜನರು ಕೆಂಡಾಮಂಡಲವಾಗಿದ್ದಾರೆ. ಕೂಡಲೇ ತಾಲೂಕು ಕಲ್ಯಾಣಾಧಿಕಾರಿ ಮಂಜುಳಾ ಮತ್ತು ಸಂಬಂಧಪಟ್ಟ ಮೇಲ್ವಿಚಾರಕಿ ಸರಸ್ವತಮ್ಮ ಅವರನ್ನು ಸೇವೆಯಿಂದ ಅಮಾನತು ಮಾಡದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಚೇಳೂರು ತಾಲೂಕಿನ ನಾಗರಿಕರು ಎಚ್ಚರಿಸಿದ್ದಾರೆ.