ಸಾರಾಂಶ
ಕಲಘಟಗಿ:
ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಬೋರ್‌ವೆಲ್ ನೀರು ಸೇವಿಸಿ 100 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು ಅವರಲ್ಲಿ 31 ಜನರಿಗೆ ತಾಲೂಕು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಮುಂದುವರಿದಿದ್ದು, ಗಂಭೀರವಾಗಿರುವ ನಾಲ್ವರನ್ನು ರಾತ್ರಿ ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ಸೇರಿಸಲಾಗಿದೆ.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಇತ್ತೀಚೆಗೆ ಹೊಸ ಬೋರ್‌ವೆಲ್ ಕೊರೆಸಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ಬೋರ್‌ವೆಲ್ ತುಂಬಿಕೊಂಡಿದೆ. ಇದೇ ನೀರನ್ನು ಗ್ರಾಮಸ್ಥರು ಸೇವಿಸಿದ್ದರಿಂದ ಗುರುವಾರ ಬೆಳಗ್ಗೆ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರೆಲ್ಲರನ್ನೂ ತಾಲೂಕಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಬಿಡುಗಡೆಗೊಳಿಸಿ ಗ್ರಾಮಕ್ಕೆ ಕಳುಹಿಸಲಾಗಿದೆ. 31 ಜನರಿಗೆ ಮಾತ್ರ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಹೇಳಿದ್ದಾರೆ.
ನೀರು ಸೇವಿಸದಂತೆ ಸೂಚನೆ:ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿ ಹೊಸ ಬೋರ್‌ವೆಲ್ ನೀರನ್ನು ಸೇವಿಸದಂತೆ ಗ್ರಾಮಸ್ಥರಿಗೆ ಸೂಚಿಸಿದ್ದಾರೆ. ಸದ್ಯಕ್ಕೆ ಹಳೇಯ ಬೋರ್‌ವೆಲ್ ನೀರನ್ನೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ಶಶಿ ಪಾಟೀಲ್, ತಾಪಂ ಇಒ ಪಿ.ವೈ. ಸಾವಂತ್, ಪಿಡಿಒ ಪ್ರವೀಣ ಗಣಿ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದರು.
31 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದು ಯಾವುದೇ ಪ್ರಾಣಾಪಾಯವಿಲ್ಲ. ಮಧ್ಯಾಹ್ನ ವರೆಗೆ ಚಿಕಿತ್ಸೆ ನೀಡಿ ಹಲವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಎನ್.ಬಿ. ಕರ್ಲವಾಡ ಹೇಳಿದರು.