ಸಮೀಪದ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ 2 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ನೀರಿಗಾಗಿ ನಿತ್ಯ ಕೆಲಸ ಬಿಟ್ಟು ಹಗಲು ರಾತ್ರಿ ನೀರಿಗಾಗಿ ಅಲಿಯುವಂತಾಗಿದೆ ಎಂದು ಮಹಿಳೆಯರು ಗ್ರಾಮ ಪಂಚಾಯತಿ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕವಿತಾಳ

ಸಮೀಪದ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ 2 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ನೀರಿಗಾಗಿ ನಿತ್ಯ ಕೆಲಸ ಬಿಟ್ಟು ಹಗಲು ರಾತ್ರಿ ನೀರಿಗಾಗಿ ಅಲಿಯುವಂತಾಗಿದೆ ಎಂದು ಮಹಿಳೆಯರು ಗ್ರಾಮ ಪಂಚಾಯತಿ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

4 ಸಾವಿರ ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಪಂಚಾಯತಿ ವತಿಯಿಂದ ಮೂರು ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಅಂತರ್ಜಲಮಟ್ಟ ಕುಸಿದಿರುವ ಪರಿಣಾಮ ಕುಡಿಯಲು ಹಾಗೂ ದನಕರುಗಳ ಬಳಕೆಗೆ ನೀರಿಲ್ಲದೆ ಮಹಿಳೆಯರು ಮತ್ತು ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ.

2 ನೇ ವಾರ್ಡ್ ಸೇರಿದಂತೆ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ ಎಂದು ಪಾರ್ವತಮ್ಮ, ಸೌಭಾಗ್ಯಮ್ಮ, ಹನುಮಮ್ಮ, ಲಕ್ಷ್ಮಿ ದೇವಿ, ಪಾರ್ವತಿ, ರತ್ನಮ್ಮ, ಸುಜಾತಾ, ಪಾರ್ವತಮ್ಮ, ಸಿದ್ದಲಿಂಗಮ್ಮ ಯಲ್ಲಮ್ಮ, ಬಸಮ್ಮ, ಅಮರಮ್ಮ, ಶೈಲಜಾ ಆಕ್ರೋಶ ಹೊರಹಾಕಿದ್ದಾರೆ. ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಎರಡು ದಿನಕೊಮ್ಮೆಯಾದರೂ ನೀರು ಬಿಟ್ಟರೆ ಗ್ರಾಮದ ಎಲ್ಲ ಜನರಿಗೂ ಸರಿಯಾಗಿ ನೀರು ತಲುಪುತ್ತವೆ ನಿತ್ಯ ನೀರು ಬಿಡುವುದರಿಂದ ಯಾರಿಗೂ ಸರಿಯಾಗಿ ಒಂದು ಕೊಡ ನೀರು ಸಿಗುತ್ತಿಲ್ಲ. ಕೊಳವೆಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಜನಪ್ರತಿನಿದಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ. ಇರಕಲ್ ಕೆರೆಯ ನೀರು ನೇರವಾಗಿ ಅಮೀನಗಡ ಗ್ರಾಮಕ್ಕೆ ಪೈಪ್ ಲೈನ್ ಮಾಡಿಸಿ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಿ ಎಂದು ಹಲವು ಬಾರಿ ಮನವಿ ಮಾಡಿದರು ನಿರ್ಲಕ್ಷ ತೋರುತಿದ್ದಾರೆ ಎಂದು ಶಿವುಗೌಡ ದಳಪತಿ, ಅಮರೇಶ, ಮಹಾಂತ ಗೌಡ, ಹುಚ್ಚರಡ್ಡಿ, ನಿಂಗಪ್ಪ, ಹನುಮಂತ, ನೀಲಕಂಠರಾಯ, ಸಗರಪ್ಪ, ಅಜ್ಮಿರ್, ಕಿರಣ ದೂರಿದರು.

ಸೋಮವಾರದ ಒಳಗಾಗಿ ನೀರಿನ ಸಮಸ್ಯೆ ಸರಿಪಡಿಸಲಾಗುವುದು ಎಂದು ಇಓ ಶಿವಾನಂದ ರಡ್ಡಿ ಅವರು ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಕೈ ಬಿಟ್ಟ ಮಹಿಳೆಯರು ಸಮಸ್ಯೆ ಸರಿಪಡಿಸದಿದ್ದರೆ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಲಾಗುವುದು ಎಂದು ಎಚ್ಚರಿಸಿದರು.