ಆ.15ರೊಳಗೆ 100 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ

| Published : Jul 23 2025, 01:45 AM IST

ಸಾರಾಂಶ

ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮೀಣ ಮನೆಗಳಿಗೆ ಸುರಕ್ಷಿತ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಧಿಕಾರಿಗಳಿಗೆ ನೀಡಿದ ನಿಯಮ ಪಾಲಿಸಿದರೆ ಯೋಜನೆ ಸಾರ್ಥಕವಾಗಲಿದ್ದು, ಗ್ರಾಮಸ್ಥರ ಸಹಕಾರವು ಸಿಗಲಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- ಜೆಜೆಎಂ 24*7 ನೀರು ಸರಬರಾಜು ಘೋಷಣೆ ಕಾರ್ಯಕ್ರಮದಲ್ಲಿ ಶಾಸಕ ಶಾಂತನಗೌಡ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮೀಣ ಮನೆಗಳಿಗೆ ಸುರಕ್ಷಿತ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಧಿಕಾರಿಗಳಿಗೆ ನೀಡಿದ ನಿಯಮ ಪಾಲಿಸಿದರೆ ಯೋಜನೆ ಸಾರ್ಥಕವಾಗಲಿದ್ದು, ಗ್ರಾಮಸ್ಥರ ಸಹಕಾರವು ಸಿಗಲಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ನ್ಯಾಮತಿ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಚಿನ್ನಿಕಟ್ಟೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸುಸ್ಥಿರ ಕುಡಿಯುವ ನೀರಿನ ಯೋಜನೆಯಡಿ ಜೆಜೆಎಂ 24*7 ನೀರು ಸರಬರಾಜು ಘೋಷಣಾ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಲಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ಜಿಲ್ಲೆಯಲ್ಲಿ 25ನೇ ಗ್ರಾಮಗಳಲ್ಲಿ ಚಾಲನೆಗೊಂಡು ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಪ್ರತಿ ವ್ಯಕ್ತಿಗೆ 55 ಲೀಟರ್‌ನಂತೆ ಆ.15ರೊಳಗೆ ಅವಳಿ ತಾಲೂಕಿನ ಕನಿಷ್ಠ 100 ಗ್ರಾಮಗಳಿಗೆ ಜಲ ಜೀವನ್‌ ಮಿಷನ್‌ ಯೋಜನೆಯ ಸೌಲಭ್ಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಗ್ರಾಮದ ದೇಗುಲ ನಿರ್ಮಾಣಕ್ಕೆ ₹20 ಲಕ್ಷ ಅನುದಾನ ನೀಡಲಾಗುವುದು. ಕಳೆದ ಸರ್ಕಾರ ಮಾಡಿದ ಸಾಲವನ್ನು ತೀರಿಸಿದ್ದು, ಇದೀಗ ಅನುದಾನವನ್ನು ನಮ್ಮ ಕಾಂಗ್ರೆಸ್‌ ಸರ್ಕಾರ ನೀಡಲಿದೆ. ರಸ್ತೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಅನುದಾನ ನೀಡಲಿದೆ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್‌ ಸೋಮ್ಲಾನಾಯ್ಕ ಮಾತನಾಡಿ, ನ್ಯಾಮತಿ ತಾಲೂಕಿನ ಬಿದರಹಳ್ಳಿ ಗ್ರಾಮದ 182 ಮನೆಗಳಿಗೆ ₹62 ಲಕ್ಷ, ಬಿದರಳ್ಳಿ ತಾಂಡದ 54 ಮನೆಗಳಿಗೆ ₹24 ಲಕ್ಷ ವೆಚ್ಚದಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಾಲೂಕಿನ ಸೋಗಿಲು, ಕುರುವ, ಗಂಗನಕೋಟೆ, ಸವಳಂಗ ಗ್ರಾಮಗಳಿಗೆ ಯೋಜನೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಮಂಜುನಾಥ, ಶಶಿಕಲಾ ಓಂಕಾರಪ್ಪ, ಕವಿತಾ ಯೋಗೀಶ್‌ ನಾಯ್ಕ, ಕುಮಾರ, ಕೆ.ಟಿ.ಮೂರ್ತಿ, ರಮೇಶ್‌, ವೀರೇಶ್‌ ನಾಯ್ಕ, ಜಮಿನಾಬಾಯಿ, ತಾಪಂ ಇಒ ರಾಘವೇಂದ್ರ, ಜಿ.ಪಂ. ಯೋಜನಾ ವ್ಯವಸ್ಥಾಪಕ ಬಿ.ಟಿ. ಜಗದೀಶ್‌, ಪಿಡಿಒ ಜ್ಯೋತಿ ಶೆಟ್ಟಿ, ನೀರುಗಂಟಿ ಲೋಕೇಶ್‌, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಸಿದ್ದೇಶ್ವರ ಸಮಿತಿ ಮಹಿಳೆಯರು ಇದ್ದರು.

- - -

-ಚಿತ್ರ:

ಕಾರ್ಯಕ್ರಮಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಚಾಲನೆ ನೀಡಿದರು.