ಗುಂಡ್ಲುಪೇಟೆ: ಬಂಡೀಪುರ ಕಾಡಂಚಿನ ಮಗುವಿನಹಳ್ಳಿ ಹಾಡಿಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ತಲೆ ತೋರಿದೆ. ಈ ಸಮಸ್ಯೆ ನಿನ್ನೆ, ಮೊನ್ನೆಯದಲ್ಲ, ಕಳೆದ ಎರಡು ತಿಂಗಳಿನಿಂದಲೂ ಇದ್ದರೂ ಗಮನಿಸುವವರೇ ಇಲ್ಲವಾಗಿದೆ. ಮಗುವಿನಹಳ್ಳಿ ಹಾಡಿಯಲ್ಲಿ ಜಾನುವಾರುಗಳಿಗಾಗಿ ಕಟ್ಟಿರುವ ನೀರಿನ ತೊಟ್ಟಿಯಲ್ಲೇ ಹಾಡಿ ಮಹಿಳೆಯರು ಹಾಗೂ ಮಕ್ಕಳು ಕುಡಿಯಲು ನೀರು ಹಿಡಿದುಕೊಂಡು ಹೋಗುತ್ತಿದ್ದಾರೆ

ಗುಂಡ್ಲುಪೇಟೆ: ಬಂಡೀಪುರ ಕಾಡಂಚಿನ ಮಗುವಿನಹಳ್ಳಿ ಹಾಡಿಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ತಲೆ ತೋರಿದೆ. ಈ ಸಮಸ್ಯೆ ನಿನ್ನೆ, ಮೊನ್ನೆಯದಲ್ಲ, ಕಳೆದ ಎರಡು ತಿಂಗಳಿನಿಂದಲೂ ಇದ್ದರೂ ಗಮನಿಸುವವರೇ ಇಲ್ಲವಾಗಿದೆ. ಮಗುವಿನಹಳ್ಳಿ ಹಾಡಿಯಲ್ಲಿ ಜಾನುವಾರುಗಳಿಗಾಗಿ ಕಟ್ಟಿರುವ ನೀರಿನ ತೊಟ್ಟಿಯಲ್ಲೇ ಹಾಡಿ ಮಹಿಳೆಯರು ಹಾಗೂ ಮಕ್ಕಳು ಕುಡಿಯಲು ನೀರು ಹಿಡಿದುಕೊಂಡು ಹೋಗುತ್ತಿದ್ದಾರೆ !

ಹಾಡಿಯ ಗಿರಿಜನರಿಗೆ ಶುದ್ಧ ಕುಡಿಯುವ ನೀರನ್ನು ಮನೆಗಳಿಗೆ ಒದಗಿಸಲು ಆಗಲಿಲ್ಲ ಎಂದರೆ ತಾಲೂಕು ಆಡಳಿತ ಇನ್ಮುಂದೆ ಎದುರಾಗುವ ಬೇಸಿಗೆ ಸಮಸ್ಯೆ ಹೇಗೆ ನಿರ್ವಹಿಸಲಿದೆ ಎಂಬ ಪ್ರಶ್ನೆಯೂ ಎದ್ದಿದೆ. ಒಟ್ಟಾರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಾಲೂಕು ಸಂಪೂರ್ಣ ವಿಫಲವಾಗಿರುವುದಂತೂ ಸತ್ಯ.

ತಾಲೂಕಿನ ಹಂಗಳ ಹೋಬಳಿಗೆ ಸೇರಿದ ಕಾಡಂಚಿನ ಗ್ರಾಮದ ಮಗುವಿನಹಳ್ಳಿ ಹಾಡಿಯಲ್ಲಿ ಗಿರಿಜನ ೩೫ ಕುಟುಂಬ ವಾಸಿಸುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಕುಡಿಯುವ ನೀರು ಮನೆ ಮನೆಗೆ ಬರುತ್ತಿಲ್ಲ. ಗ್ರಾಮದ ಬೋರ್‌ನಲ್ಲಿ ನೀರು ಕಡಿಮೆಯಾಗಿರುವುದೇ ಕಾರಣ. ಮಳೆ ಬೀಳದ ಕಾರಣ ಅಂತರ್ಜಲ ಮಟ್ಟದ ಕುಸಿದಿದೆ. ಹಾಗಾಗಿ ಮಗುವಿನಹಳ್ಳಿ ಹಾಡಿಯಲ್ಲಿ ವಾಸಿಸುವ ಗಿರಿಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.

ಹಾಡಿಯ ಜನರು ಎಂಬ ತಾತ್ಸಾರಕ್ಕೋ? ಅಥವಾ ಹಾಡಿಯ ಜನರು ಪ್ರಶ್ನೆ ಮಾಡಲ್ಲ ಎಂಬ ಕಾರಣಕ್ಕೋ ಏನೋ ಹಾಡಿಯ ಜನರು ಮಾತ್ರ ಜಾನುವಾರುಗಳಿಗೆ ಕಟ್ಟಿರುವ ನೀರಿನ ತೊಟ್ಟಿಯಲ್ಲಿ ನೀರು ಹಿಡಿದುಕೊಂಡು ಜೀವನ ಸವೆಸುತ್ತಿದ್ದಾರೆ.

ಮಗುವಿನಹಳ್ಳಿ ಹಾಡಿ ಬಳಿಯ ಕೆರೆ, ಕಟ್ಟೆಗಳಲ್ಲಿ ನೀರಿಲ್ಲ. ಮಳೆ ಇಲ್ಲದ ಕಾರಣ ಬತ್ತಿ ಹೋಗಿವೆ. ಹಾಡಿಗೆ ಬೋರ್‌ ಕೊರಿಸಿ ನೀರು ಕೊಡಿ, ಇಲ್ಲ ಕಾವೇರಿ ನೀರು ಒದಗಿಸಿ ಎಂಬುದು ಹಾಡಿಯ ಮಹಿಳೆಯರು ಒಕ್ಕಲೂರಿನ ಆಗ್ರಹವಾಗಿದೆ.

ಜಾನುವಾರುಗಳು ನೀರನ್ನು ಅದೇ ತೊಟ್ಟಿಯಲ್ಲಿ ಕುಡಿಯಲು ಬರುತ್ತವೆ.ಅದೇ ತೊಟ್ಟಿಗೆ ಬೀಳುವ ನೀರನ್ನು ಹಾಡಿಯ ಜನರು ಹಿಡಿದುಕೊಂಡು ಹೋಗುವ ಸ್ಥಿತಿಗೆ ಜಿಲ್ಲಾಡಳಿತ ಹಾಗೂ ತಾಲೂಕು ದೂಡಿರುವುದಂತೂ ದಿಟ.

ಹಾಡಿಯ ಜನರಿಗೆ ಕುಡಿಯಲು ನೀರು ಬೇಕು,ಬಟ್ಟೆ ತೊಳೆಯಲು ನೀರು ಬೇಕು,ಸ್ನಾನ ಮಾಡಲು ನೀರು ಬೇಕು,ಪಾತ್ರೆ ತೊಳೆಯಲು ನೀರು ಬೇಕು ಆದರೆ ಮನುಷ್ಯನಿಗೆ ಅಗತ್ಯವಾಗಿ ಬೇಕಾದ ಕುಡಿಯುವ ನೀರನ್ನೇ ಸಮರ್ಪಕವಾಗಿ ನೀಡಲು ಆಗುತ್ತಿಲ್ಲವಲ್ಲ ಎಂದು ಹಾಡಿಯ ವಾಸಿ, ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ತಾಲೂಕು ಅಧ್ಯಕ್ಷೆ ಬಸಮ್ಮ ಆರೋಪಿಸಿದ್ದಾರೆ.

ಮಗುವಿನಹಳ್ಳಿ ಹಾಡಿಯ ಇರುವ ಬೋರ್‌ ನಲ್ಲಿ ನೀರು ಕಡಿಮೆಯಾಗಿದೆ.ನೀರು ಕಡಿಮೆಯಾದ ಕಾರಣ ನೀರಿನ ಸಮಸ್ಯೆ ಉಲ್ಭಣವಾಗಿದೆ ಇನ್ಮುಂದೆಯೂ ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ಹೇಳಿದ್ದಾರೆ.

ಕೋಟ್‌...........

ಸ್ವಾತಂತ್ರ್ಯ ಬಂದು 80 ವರ್ಷಗಳಾಗುತ್ತಿವೆ. ಗಿರಿಜನರು ವಾಸಿಸುವ ಕಾಡಂಚಿನ ಗ್ರಾಮದ ಹಾಡಿಯ ಜನರಿಗೆ ಕುಡಿಯಲು ನೀರು ಕೊಡಲಾಗದ ಗ್ರಾಪಂ, ತಾಪಂ, ಜಿಪಂ ಅಸ್ತಿತ್ವದಲ್ಲಿ ಇದೆಯಾ? ಶಾಸಕ, ಸಂಸದರ ಕೆಲಸವೇನು? ಹಾಡಿ ಬಳಿಯ ಮಗುವಿನಹಳ್ಳಿಗೆ ಕಾವೇರಿ ನೀರು ಬರುತ್ತಿದೆ. ನಮ್ಮ ಹಾಡಿಗೇಕೆ ಬರುತ್ತಿಲ್ಲ. ಕಾವೇರಿ ನೀರಿನ ಸಂಪರ್ಕ ಹಾಡಿಗೂ ಕೊಡಿಸಲಿ.

-ಬಸಮ್ಮ, ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ

ಕೋಟ್‌..........

ಮಗುವಿನಹಳ್ಳಿ ಹಾಡಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿರೋದು ನಿಜ. ಅಂತರ್ಜಲ ಮಟ್ಟ ಕುಸಿದ ಕಾರಣ ಹಾಡಿಯಲ್ಲಿರುವ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಪಬ್ಲಿಕ್‌ ನಲ್ಲೀಲಿ ನೀರು ಸದ್ಯಕ್ಕೆ ಒದಗಿಸಲಾಗುತ್ತಿದೆ. ಬೋರ್‌ ಮತ್ತೆ ಹೆಚ್ಚುವರಿ ಪೈಪ್‌ ಬಿಡಿಸಿ ನೀರು ಒದಗಿಸುವ ಕೆಲಸ ನಾಳೆಯಿಂದಲೇ ಮಾಡಲಾಗುವುದು.

-ಶಾಂತಮಲ್ಲಪ್ಪ, ಪಿಡಿಒ, ಹಂಗಳ

23ಜಿಪಿಟಿ5

ಬಂಡೀಪುರ ಕಾಡಂಚಿನ ಮಗುವಿನಹಳ್ಳಿ ಹಾಡಿಯಲ್ಲಿ ಜಾನುವಾರುಗಳು ನೀರು ತೊಟ್ಟಿಯಲ್ಲಿ ನೀರು ಕುಡಿಯುವ ದೃಶ್ಯ.

23ಜಿಪಿಟಿ6

ಬಂಡೀಪುರ ಕಾಡಂಚಿನ ಮಗುವಿನಹಳ್ಳಿ ಹಾಡಿಯಲ್ಲಿ ಜಾನುವಾರುಗಳಿಗೆ ಕಟ್ಟಿದ ತೊಟ್ಟಿಯಲ್ಲಿ ನೀರು ಹಿಡಿಯುತ್ತಿರುವ ಮಹಿಳೆಯರು.