ಸಾರಾಂಶ
ಚಿತ್ರದುರ್ಗ: ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ, ತಕ್ಷಣವೇ ಸ್ಪಂದಿಸಿ, ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ಆಯಾ ಗ್ರಾಮ ಪಂಚಾಯತಿ ಪಿಡಿಓಗಳ ಮೊದಲ ಆದ್ಯತೆ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕುಡಿವ ನೀರು ಅಭಾವ ನಿರ್ವಹಣೆ ಸಂಬಂಧ ಬುಧವಾರ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಳೆಯ ಕೊರತೆ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ 27 ಗ್ರಾಮ ಪಂಚಾಯತಿಗಳ 56 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಪೈಕಿ ಈಗಾಗಲೇ 27 ಗ್ರಾಮಗಳಲ್ಲಿ ಸಮಸ್ಯೆ ತೀವ್ರವಾಗಿದ್ದು, 33 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 24 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‍ಗಳನ್ನು ಗುರುತಿಸಿ, ಅವರುಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು, ನೀರು ಪೂರೈಸಲು ಕೂಡ ಕ್ರಮಕೈಗೊಳ್ಳಲಾಗಿದೆ ಎಂದರು.ಗ್ರಾಮ ಪಂಚಾಯತಿಗಳ ಪಿಡಿಓಗಳು ಕುಡಿಯುವ ನೀರಿನ ಪೂರೈಕೆ ಬಗ್ಗೆ ತೀವ್ರ ನಿಗಾವಹಿಸುವುದು ಅಗತ್ಯವಾಗಿದೆ. ಪೂರೈಸಲಾಗುವ ನೀರಿನ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ನೀರಿನ ಸಮಸ್ಯೆ ತೀವ್ರವಾಗಿರುವ ಕಡೆಗಳಲ್ಲಿರುವ ಬೋರ್‌ವೆಲ್‍ಗಳು ವಿಫಲವಾಗಿದ್ದಲ್ಲಿ, ಅಂತಹ ಕೊಳವೆಬಾವಿಗಳ ಪುನಶ್ಚೇತನಕ್ಕೆ ಮುಂದಾಗಬೇಕು. ಖಾಸಗಿ ಬೋರ್‌ವೆಲ್‍ಗಳನ್ನು ಬಾಡಿಗೆಗೆ ಪಡೆಯಲು ಕ್ರಮವಹಿಸಬೇಕು. ಬಳಿಕವೂ ಸಾಧ್ಯವಾಗದಿದ್ದಲ್ಲಿ ತಕ್ಷಣಕ್ಕೆ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು. ಹೊಸ ಬೋರ್‍ವೆಲ್ ಕೊರೆಯಿಸುವುದು ಅತ್ಯಂತ ಕೊನೆಯ ಆಯ್ಕೆಯಾಗಿದ್ದು, ಇದಕ್ಕಾಗಿ ನೀರಿನ ಲಭ್ಯತೆ ಬಗ್ಗೆ ಭೂವಿಜ್ಞಾನಿಗಳ ಅಭಿಪ್ರಾಯ ಅತ್ಯಂತ ಅಗತ್ಯವಾಗಿದೆ ಎಂದು ಸೂಚನೆ ನೀಡಿದರು.
ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬಂದಲ್ಲಿ, ತಕ್ಷಣ ಸ್ಪಂದಿಸಿ, ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಬಗ್ಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ 24*7 ಸಹಾಯವಾಣಿ ಪ್ರಾರಂಭಿಸಲಾಗಿದೆ. ಸಹಾಯವಾಣಿಗಳಿಗೆ ಬರುವ ಸಾರ್ವಜನಿಕರ ಕರೆಗಳಿಗೆ ಸ್ವಂದಿಸಿ, ಅವರ ಕುಂದು-ಕೊರತೆಗಳನ್ನು ಅದರಲ್ಲೂ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು. ಯಾವುದೇ ಬಗೆಯ ಉದಾಸೀನತೆ ತೋರಿದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಇಒ ಸೋಮಶೇಖರ್ ಎಚ್ಚರಿಕೆ ನೀಡಿದರು.ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಇದ್ದರು. ಎಲ್ಲ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒ ಗಳು ಕೂಡ ವಿಡಿಯೋ ಸಂವಾದ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕುಡಿವ ನೀರಿಗಾಗಿ ಕರೆ ಮಾಡಿ:ಜಿಲ್ಲಾ ಪಂಚಾಯತ್ ಕಚೇರಿ-08194-200040.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿತ್ರದುರ್ಗ-08194-200041.ತಾಲೂಕು ಪಂಚಾಯಿತಿ ಚಿತ್ರದುರ್ಗ- 08194-230232.
ಚಳ್ಳಕೆರೆ-8792228043.ಹಿರಿಯೂರು-9480861112.
ಹೊಳಲ್ಕೆರೆ-9538812986.ಹೊಸದುರ್ಗ: 08199-295024.
ಮೊಳಕಾಲ್ಮುರು: 08198-229122.