ಕೀಳರಿಮೆ ತೊರೆದು ಸರ್ಕಾರದ ಸವಲತ್ತುಗಳ ಪಡೆಯಿರಿ

| Published : Mar 14 2024, 02:09 AM IST

ಕೀಳರಿಮೆ ತೊರೆದು ಸರ್ಕಾರದ ಸವಲತ್ತುಗಳ ಪಡೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಲಚೇತನರು ಕೀಳರಿಮೆ, ಸಂಕೋಚ ಬಿಟ್ಟು ಯುಡಿಐಡಿ ಕಾರ್ಡ್ ಮಾಡಿಸಿಕೊಂಡು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬಹುದು.

ಚಿತ್ರದುರ್ಗ: ವಿಕಲಚೇತನರು ಕೀಳರಿಮೆ, ಸಂಕೋಚ ಬಿಟ್ಟು ಯುಡಿಐಡಿ ಕಾರ್ಡ್ ಮಾಡಿಸಿಕೊಂಡು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ವೀಣಾ ಮನವಿ ಮಾಡಿದರು.

ಎನೋಬಲ್ ಇಂಡಿಯಾ, ಸ್ಪೂರ್ತಿ ವಿಕಲಚೇತನರ ಟ್ರಸ್ಟ್, ಜನಮುಖಿ ಶಿಕ್ಷಣ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಕ್ರೀಡಾ ಭವನದಲ್ಲಿ ನಡೆದ ನಮ್ಮವಾಣಿ ಸಮುದಾಯ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ವಾಣಿ ಸಮುದಾಯ ಸಮ್ಮಿಲನ ಕಾರ್ಯಕ್ರಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಹೋಗಿ ಸರ್ವೆ ನಡೆಸುವ ಸಂದರ್ಭದಲ್ಲಿ ವಿಕಲಚೇತನರಿಗೆ ಕಾರ್ಡ್ ಬಗ್ಗೆ ಮಾಹಿತಿ ಕೊಟ್ಟು ಇದರಿಂದ ಆಗುವ ಪ್ರಯೋಜನ ತಿಳಿಸುವರು. ವಿಕಲಚೇತನರಿಗಾಗಿ ಬ್ರೈಲ್‌ ಕಿಟ್, ವಾಕಿಂಗ್ ಲ್ಯಾಪ್‍ಟಾಪ್ ಸೇರಿ ಹಲವಾರು ಸೌಲಭ್ಯಗಳಿವೆ ಎಲ್ಲವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರೋಗ್ರಾಂ ಆಫೀಸರ್ ವಿಜಯ್ ಮಾತನಾಡಿ ಅಂಗವಿಕಲರು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಮುದಾಯ ಸಮ್ಮಿಲನ ಕಾರ್ಯಕ್ರಮ ನೆರವಾಗಲಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡುವುದರ ಜೊತೆ ಅರಿವು ಮೂಡಿಸಬೇಕು. ಮಹಿಳಾ ಚಿಕಿತ್ಸಾ ಘಟಕವಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶವಿದೆ ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ, ಒಂದು ಕಾಲದಲ್ಲಿ ವಿಕಲಚೇತನರನ್ನು ಸಮಾಜ ಕೀಳಾಗಿ ನೋಡುತ್ತಿತ್ತು. ಈಗ ಕಾಲ ಬದಲಾಗಿರುವುದರಿಂದ ವಿಕಲಚೇತನರು ಕೀಳರಿಮೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಕಲಚೇತನರಿಗೆ ಮೀಸಲಾತಿಯಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅಂಗವಿಕಲರುಗಳಿದ್ದಾರೆ. ಆದ್ದರಿಂದ ವಿಕಲಚೇತನರು ಅನುಕಂಪಕ್ಕಿಂತ ಪ್ರೋತ್ಸಾಹ ಮುಖ್ಯ ಎಂದು ಹೇಳಿದರು.

ಹಿರಿಯ ನಾಗರೀಕರು ಮಕ್ಕಳಿಂದ ಏನಾದರೂ ಕಿರುಕುಳಕ್ಕೆ ಒಳಗಾದರೆ ಉಪವಿಭಾಗಾಧಿಕಾರಿ ಕಚೇರಿಗೆ ದೂರು ಕೊಟ್ಟು ರಕ್ಷಣೆ ಪಡೆದುಕೊಳ್ಳಬಹುದು. ಕಾನೂನು ಪ್ರಾಧಿಕಾರದಲ್ಲಿ ಉಚಿತ ಕಾನೂನು ನೆರವಿದೆ. ಸರ್ಕಾರದಿಂದ ಎಲ್ಲಾ ರೀತಿಯ ಸಹಾಯವಿರುವುದರ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸಬೇಕೆಂದರು.

ಎನೋಬಲ್ ಇಂಡಿಯಾ ಮುಖ್ಯಸ್ಥೆ ಬೆಂಗಳೂರಿನ ರೋಸ್ಲಿನ್ ಮಾತನಾಡಿ, 1990ರಲ್ಲಿ ಎನೋಬಲ್ ಇಂಡಿಯಾ ಬೆಂಗಳೂರಿನಲ್ಲಿ ಸ್ಥಾಪಿತವಾಯಿತು. 2016ರಲ್ಲಿ ನಮ್ಮ ವಾಣಿ ಆರಂಭಗೊಂಡಿತು. ವಿಕಲಚೇತನರಿಗೆ ಸರ್ಕಾರದಿಂದ ಏನು ಸೌಲಭ್ಯಗಳಿವೆ ಎನ್ನುವ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ನೀಡಬೇಕೆನ್ನುವುದು ನಮ್ಮ ವಾಣಿ ಸಮುದಾಯ ಸಮ್ಮಿಲನ ಕಾರ್ಯಕ್ರಮದ ಉದ್ದೇಶ. ಉದ್ಯೋಗ, ತರಬೇತಿ, ಇಂಗ್ಲಿಷ್ ಮಾತನಾಡುವುದು, ಸ್ವ-ಉದ್ಯೋಗ, ಸಮಸ್ಯೆಗಳಿಗೆ ಪರಿಹಾರ, ಸ್ವ-ಸಹಾಯ ಸಂಘಗಳ ಮಾಹಿತಿ, ಶಿಕ್ಷಣ ಇನ್ನು ಅನೇಕ ಉಪಯುಕ್ತ ವಿಚಾರಗಳ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು. ಸ್ಪೂರ್ತಿ ವಿಕಲಚೇತನರ ಟ್ರಸ್ಟ್ ಅಧ್ಯಕ್ಷೆ ತಿಪ್ಪಮ್ಮ ಅಧ್ಯಕ್ಷತೆವಹಿಸಿದ್ದರು. ಏನೋಬಲ್ ಇಂಡಿಯಾದ ಗುರುಪ್ರಸಾದ್ ವೇದಿಕೆಯಲ್ಲಿದ್ದರು.