ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆನಾನು ಶಾಸಕನಾದ 10 ತಿಂಗಳ ಅವಧಿಯಲ್ಲಿ ಆರು ಮಂದಿ ಸಚಿವರು ಕ್ಷೇತ್ರಕ್ಕೆ ಬಂದು ಸುಮ್ಮನೇ ಹೋಗಿಲ್ಲ, ಕೋಟ್ಯಾಂತರ ಅನುದಾನ ಕೊಟ್ಟಿದ್ದಾರೆ ಕೆಲ ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ತಾಲೂಕಿನ ಅಗತಗೌಡನಹಳ್ಳಿ, ಮಳವಳ್ಳಿ, ನೇನೇಕಟ್ಟೆ, ವೀರನಪುರ, ಚನ್ನಂಜಯ್ಯನಹಂಡಿ, ಬೆಟ್ಟಹಳ್ಳಿ, ಅಂಕಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಬೆಟ್ಟಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ, ಗ್ರಾಮದ ಸರ್ಕಾರಿ ಶಾಲೆಯ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಸಚಿವ ಶಿವಾನಂದ ಪಾಟೀಲರು ಹತ್ತಿ ಮಾರುಕಟ್ಟೆಗೆ 6 ಕೋಟಿ, ಸಚಿವ ನಾಗೇಂದ್ರ ವಾಲ್ಮೀಕಿ ಭವನ ಕ್ರೀಡಾಂಗಣಕ್ಕೆ ಕೋಟಿ, ಸಚಿವ ಭೈರತಿ ಸುರೇಶ್ ಪಟ್ಟಣದ ಡ್ರೈನೇಜ್‌ಗೂ 30 ರಿಂದ 40 ಕೋಟಿ, ಸಚಿವರಾದ ಸತೀಶ್ ಜಾರಕಿಹೊಳಿ ರಸ್ತೆಗೆ, ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಕಾಡಾನೆ ಹಾವಳಿಗೆ ತಡೆಗೆ 10 ಕೋಟಿ ನೀಡಿದ್ದಾರೆ ಎಂದರು.ಕಳೆದ ಅವಧಿಯ ಅನುದಾನದಲ್ಲಿ ನಾನು ಗುದ್ದಲಿ ಪೂಜೆ ಮಾಡುತ್ತಿರುವುದು ಎಂದು ವಿಪಕ್ಷದವರು ಹೇಳುತ್ತಿದ್ದಾರೆ. ಕಳೆದ ಸರ್ಕಾರದಲ್ಲಿ ಕೆಲ ಕಾಮಗಾರಿಗೆ ಅನುಮೋದನೆ ಆಗಿದೆ ಆದರೆ ಅನುದಾನ ಬಿಡುಗಡೆಯಾಗಿರಲಿಲ್ಲ. ಅನುದಾನ ನಾನು ತಂದ ಮೇಲೆ ನಾನು ತಾನೇ ಗುದ್ದಲಿ ಪೂಜೆ ಮಾಡಬೇಕಲ್ಲವಾ? ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ನಾನು ಅನುದಾನ ತಂದಿದ್ದೇನೆ ಗುದ್ದಲಿ ಪೂಜೆ ಮಾಡುತ್ತಿದ್ದೇನೆ. ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ. ಅಂತ ರಾಜಕಾರಣ ಮಾಡುವುದಿಲ್ಲ ಎಂದು ಕಿಡಿ ಕಾರಿದರು.ಸಮಾರಂಭದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಎಪಿಎಂಸಿ ಅಧ್ಯಕ್ಷ ಮೊಳ್ಳಯ್ಯನಹುಂಡಿ ಬಸವರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ತಾಪಂ ಮಾಜಿ ಸದಸ್ಯ ಬೆಟ್ಟಹಳ್ಳಿ ಕೆಂಪರಾಜು,ಗ್ರಾಪಂ ಅಧ್ಯಕ್ಷ ರೇಚಪ್ಪ, ಗ್ರಾಪಂ ಸದಸ್ಯ ಬೆಟ್ಟಹಳ್ಳಿ ದೀಪು, ಕಾಂಗ್ರೆಸ್ ಮುಖಂಡರಾದ ಕಬ್ಬಹಳ್ಳಿ ದೀಪು,ಎಚ್.ಎನ್.ಬಸವರಾಜು ಸೇರಿದಂತೆ ಹಲವರಿದ್ದರು.ಕಾಂಗ್ರೆಸ್ ಭದ್ರ ಕೋಟೆ ಈಗ ಮತ್ತಷ್ಟು ಗಟ್ಟಿ: ಗುಂಡ್ಲುಪೇಟೆ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ ಈಗ ಕೋಟೆ ಮತ್ತಷ್ಟು ಗಟ್ಟಿಯಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಟೀಕಾಕಾರರಿಗೆ ತಿರುಗೇಟು ನೀಡಿದರು. ತಾಲೂಕಿನ 130 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 85 ಸಂಘಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮುಂದಿದ್ದೇವೆ ಹಾಗಾಗಿ ಕಾಂಗ್ರೆಸ್ ಗಟ್ಟಿಯಾಗಿದೆ ಎಂದು ಬಿಜೆಪಿ ಹೆಸರೇಳದೆ ಟೀಕಿಸಿದರು.ವಿಪಕ್ಷದವರ ಟೀಕೆ ಮಾಡಿ ಏನು ಪ್ರಯೋಜನವಿಲ್ಲ. ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮಂತ್ರ ಎಂದರು.ಎಪಿಎಂಸಿಗೇಕೆ ಅನುದಾನ ತರಲಿಲ್ಲ:
ಕಳೆದ ಐದು ವರ್ಷ ಶಾಸಕರಾಗಿದ್ದವರು ಬೇಗೂರು ಬಳಿಯ ಹತ್ತಿ ಮಾರುಕಟ್ಟೇಗೇ ಅನುದಾನ ತರಲಿಲ್ಲ. ಎಪಿಎಂಸಿ ಅಧ್ಯಕ್ಷರಾಗಿದ್ದ ಸೋಮಹಳ್ಳಿ ಶಿವನಾಗಪ್ಪ ಅವಧಿಯಲ್ಲಿ ಹತ್ತಿ ಮಾರುಕಟ್ಟೆಗೆ ಪ್ರಪೋಸಲ್ ಸಲ್ಲಿಸಿದ್ದರು ಆಗ ಡಾ.ಗೀತಾಮಹದೇವ ಪ್ರಸಾದ್ ಸಚಿವರಾಗಿದ್ದರು ಎಂದರು. ಎಪಿಎಂಸಿಗೆ ನಾನು ಶಾಸಕನಾದ ನಂತರ ಸಚಿವ ಶಿವಾನಂದ ಪಾಟೀಲರ ಗಮನಕ್ಕೆ ತಂದರು 6 ಕೋಟಿ ಬಿಡುಗಡೆ ಮಾಡಿಸಿದೆ ಹಿಂದೆ ಶಾಸಕರಾಗಿದ್ದವರು ಏಕೆ ಅನುದಾನ ತರಲಿಲ್ಲ? ಎಂದು ವಾಗ್ದಾಳಿ ನಡೆಸಿದರು. ಕಳೆದ ಅವಧಿಯ ಕೊನೆಯಲ್ಲಿ ಘೋಷಣೆಯಾದ ಬಹುತೇಕ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿಲ್ಲ. 68 ವಿವಿಧ ಸಮುದಾಯ ಭವನಗಳು ಅರ್ಧಕ್ಕೆ ನಿಂತಿವೆ ಈಗ ಉಳಿದ ಕೆಲಸ ಪೂರ್ತಿ ಮಾಡುವುದು ನನ್ನ ಕೆಲಸ ಇದಕ್ಕೇನು ಹೇಳ್ತಾರೆ ಎಂದು ಬಿಜೆಪಿಗರನ್ನ ಕುಟುಕಿದರು.