ಸಾರಾಂಶ
ಔರಾದ್‌ನಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಸನ್ಮಾನ ಸ್ವೀಕರಿಸಿ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಔರಾದ್
ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಿದಾಗಲೇ ಶಿಕ್ಷಣ ಪಡೆದಿರುವುದಕ್ಕೂ ಸಾರ್ಥಕ ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.ಪಟ್ಟಣದ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ, ಸುಭಾಷಚಂದ್ರ ಬೋಸ್ ಯುವಕ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬದುಕಿನ ಕೊನೆ ಉಸಿರಿನವರೆಗೆ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು. ವಿದ್ಯೆ ಯಾರೂ ಕದಿಯದ ಸಂಪತ್ತಾಗಿದೆ ಎಂದರು.
ವಿದ್ಯಾರ್ಥಿ ಜೀವನ ನಮ್ಮ, ಕುಟುಂಬ, ಸಮಾಜ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುವ ಸಮಯ. ಅದ್ದರಿಂದ ವಿದ್ಯಾರ್ಥಿಗಳು ವಿದ್ಯೆ ಕಲಿತು ಸಮಾಜಕ್ಕೆ ಉಪಯೋಗಿಯಾಗಿ ಬೆಳೆಯಬೇಕು. ಹಣ, ಆಸ್ತಿಗಿಂತ ವಿದ್ಯಾ ಸಂಪತ್ತು ಶಾಶ್ವತವಾಗಿರುತ್ತದೆ ಎಂದು ತಿಳಿ ಹೇಳಿದರು.ವಿದ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ತೋಳಿ ಭರಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ರತ್ನದೀಪ ಕಸ್ತೂರೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಚಂದ್ರಕಾಂತ ಗದ್ದಗಿ, ಪಪಂ ಮಾಜಿ ಅಧ್ಯಕ್ಷ ಸುನೀಲಕುಮಾರ ದೇಶಮುಖ, ಭಾರತೀಯ ಬಸವ ಬಳಗ ಜಿಲ್ಲಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ, ಪ್ರಮುಖರಾದ ಬಸವರಾಜ ದೇಶಮುಖ, ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮುಕ್ತೆದಾರ್, ಮಹೇಶ ಗೋರನಾಳಕರ್, ಶರಣಪ್ಪ ಪಾಟೀಲ್, ಮಹಾದೇವ ಚಿಟಗೀರೆ, ಕೃಷ್ಣ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.