ವಿನಾಕಾರಣ ಕುಡಿಯುವ ನೀರು ಪೋಲು

| Published : Feb 11 2025, 12:48 AM IST

ಸಾರಾಂಶ

ಎಂ ಎಂ ಲೇಔಟ್‌ನಲ್ಲಿ ಒಂದು ತಿಂಗಳಿಂದ ವಿನಾಕಾರಣ ಕುಡಿಯುವ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗೋಣಿಕೊಪ್ಪ ಪಂಚಾಯಿತಿ 6ನೇ ವಿಭಾಗದ ಎಂ ಎಂ ಲೇಔಟ್ ನಲ್ಲಿ ಒಂದು ತಿಂಗಳಿಂದ ವಿನಾಕಾರಣ ಕುಡಿಯುವ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಎಂ .ಎಂ ಬಡಾವಣೆಯ ಎರಡನೇ ತಿರುವಿನಲ್ಲಿ ಜಲಜೀವನ್ ಯೋಜನೆಯಲ್ಲಿ ಅಳವಡಿಸಿದ ಪೈಪ್ ಒಡೆದು ಹೋದ ಕಾರಣ ನೀರು ವ್ಯರ್ಥವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಬಗ್ಗೆ ವಾರ್ಡಿನ ಮೂವರು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಕಂಡುಬಂದಿಲ್ಲ.

ಕುಡಿಯುವ ನೀರು ವಿತರಣೆಯ ಸಂದರ್ಭದಲ್ಲಿ ಸಾವಿರಾರು ಲೀಟರ್ ನೀರು, ಪೋಲಾಗುತ್ತಿದೆ. ವ್ಯರ್ಥ ಚರಂಡಿಗೆ ಹರಿದು ಹೋಗುತ್ತಿದೆ. ಕ್ರಮ ತೆಗೆದುಕೊಳ್ಳಿ ಎಂದು ಸ್ಥಳೀಯ ನಿವಾಸಿಗಳು ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದಾಗ, ಅದು ಪಂಚಾಯಿತಿಗೆ ಸಂಬಂಧಿಸಿದಲ್ಲ ಜಲಜೀವನ್ ಯೋಜನೆ ಇಂಜಿನಿಯರ್ ಗಳಿಗೆ ಸಂಬಂಧಿಸಿದು ಎಂದು ಹಗುರ ಉತ್ತರವನ್ನು ಗ್ರಾ.ಪಂ. ಸದಸ್ಯ ಹಕ್ಕೀಂ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.

ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಕುಡಿಯುವ ನೀರಿನ ಅಭಾವ ಎದುರಾಗುತ್ತದೆ. ಇಂತಹ ಸಮಯದಲ್ಲಿ ನೀರನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಗ್ರಾಮ ಸದಸ್ಯರು ಈ ವಿಚಾರವಾಗಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುವುದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರು ವ್ಯರ್ಥವಾಗುತ್ತಿರುವ ಬಗ್ಗೆ ಪತ್ರಕರ್ತರ ಗಮನಕ್ಕೆ ನಿವಾಸಿಗಳು ತಂದಾಗ ತಕ್ಷಣವೇ ಸಂಬಂಧಿಸಿದ ಸದಸ್ಯರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಲು ಪ್ರಯತ್ನಿಸಿದರೂ. ಸದಸ್ಯರು ತಕ್ಷಣಕ್ಕೆ ಕರೆಯನ್ನು ಸ್ವೀಕರಿಸಲಿಲ್ಲ. ಒಂದು ಗಂಟೆ ಸಮಯದ ನಂತರ ಕರೆ ಸ್ವೀಕರಿಸಿ ಕುಡಿಯುವ ನೀರಿನ ಬಗ್ಗೆ ತಾತ್ಸರದ ಉತ್ತರವನ್ನು ನೀಡಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ಕಾಳಜಿ ವಹಿಸಿದ ವಹಿಸದ ಸದಸ್ಯರ ಈ ನಡೆಯ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.