ಕುಡಿಯುವ ನೀರು ಸಮಸ್ಯೆ: ಚುನಾವಣೆ ಬಹಿಷ್ಕಾರ ಎಚ್ಚರಿಕೆ

| Published : Mar 23 2024, 01:05 AM IST

ಸಾರಾಂಶ

ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಬಾರಕೋಲು, ಖಾಲಿ ಕೊಡ ಪ್ರದರ್ಶನ ಮಾಡಿ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ 24 ಗಂಟೆಗಳಲ್ಲಿ ಗ್ರಾಮದ ಸಮಸ್ಯೆಗಳು ಪರಿಹರಿಸದಿದ್ದರೆ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಎಚ್ಚರಿಸಿದ್ದಾರೆ.

ಅವರು ಹಂಚಿನಾಳ ಗ್ರಾಮಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ಗ್ರಾಮದ ಜನರೊಂದಿಗೆ ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಬಾರಕೋಲು, ಖಾಲಿ ಕೊಡ ಪ್ರದರ್ಶನ ಮಾಡಿದ ನಂತರ ಮಾತನಾಡಿ, ಗ್ರಾಮದಲ್ಲಿ ಸುಮಾರು 520 ಮನೆಗಳು ಇದ್ದು, ಸುಮಾರು 2300 ಜನಸಂಖ್ಯೆ ಇದ್ದು, ಅಂದಾಜು 1400 ಮತದಾರರು ಇದ್ದರೂ ಅಧಿಕಾರಿ ನಿರ್ಲಕ್ಷ್ಯದಿಂದಾಗಿ ಕುಗ್ರಾಮವಾಗಿ ಮಾರ್ಪಟ್ಟಿದೆ ಎಂದರು.

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ತಗ್ಗು-ಗುಂಡಿಗಳಲ್ಲಿ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು, ದನಕರುಗಳು ಇದೇ ಹೊಲಸು ನೀರು ಕುಡಿಯುತ್ತಿವೆ. ಜತೆಗೆ ಗ್ರಾಮದಲ್ಲಿ ಹಳೆ ಕಾಲದ ತೆರೆದ ಬಾವಿ ಇದ್ದು, ಇದರಲ್ಲಿ ಸಾಕಷ್ಟು ಮಲೀನ ನೀರು ತುಂಬಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರ ಬಾಯಿಗೆ ಹೋಗದಂತೆ ಬಾಗಿಲು ನಿರ್ಮಿಸಿದರೆ ಸಾವು-ನೋವು ತಪ್ಪುತ್ತದೆ ಈ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ಜೆಜೆಎಂ ಯೋಜನೆಯಡಿ 6 ತಿಂಗಳ ಹಿಂದೆಯೇ ನಿರ್ಮಿಸಿದ ಟ್ಯಾಂಕ್ ಅನಾಥವಾಗಿ ನಿಂತಿದೆ. ಇದಕ್ಕಾಗಿ ಅಳವಡಿಸಲಾಗಿದ್ದ ಪಂಪ್‌ಸೆಟ್ ಮೋಟರ್ ಅನ್ನು ಗ್ರಾಮ ಪಂಚಾಯಿತಿಯವರು ಜೆಜೆಎಂ ಗುತ್ತಿಗೆದಾರರು ಬಿಚ್ಚಿಕೊಂಡು ಹೋಗಿದ್ದಾರೆ. ಇದರಿಂದ ಈ ಯೋಜನೆಯೂ ಗ್ರಾಮಕ್ಕೆ ಇದ್ದೂ ಇಲ್ಲದಂತಾಗಿದೆ. ಗ್ರಾಮದ ಬೋರವೆಲ್ ಕೆಟ್ಟ ಪರಿಣಾಮ ದೂರದ ಸರ್ಕಾರಿ ಶಾಲೆಯಲ್ಲಿರುವ ಬೋರವೆಲ್ ನಿಂದ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಗ್ರಾಮದಲ್ಲಿ ತ್ಯಾಜ್ಯ ನೀರು ರಸ್ತೆಗೆ ಹರಿದಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ತಕ್ಷಣ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಫಾಗಿಂಗ್ ಮಾಡಬೇಕು. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ದೊಡ್ಡಪ್ಪಗೌಡ, ಗೋವಿಂದಪ್ಪಗೌಡ, ಶರಣಪ್ಪ ಪೊಪಾ, ಮಲ್ಲಪ್ಪ, ನಿಂಗಪ್ಪ, ಪದ್ಮಣ್ಣ, ದೊಡ್ಡಪ್ಪ, ಚಂದ್ರಾಮ, ನಿಂಗಪ್ಪ, ಹಣಮಂತ್ರಾಯ ಶಿವಪ್ಪ, ಮಲ್ಲಮ್ಮ, ಶಾಂತಮ್, ದೇವಿಂದ್ರಮ್ಮ, ನಿಂಗಮ್ಮ, ದುರುಗಮ್ಮ, ಅಂಬ್ರಮ್ಮ, ದೇವಕೆಮ್ಮ, ದೇವಮ್ಮ, ಬಡ್ಡೆಮ್ಮ, ಮೌಲಮ್ಮ ಸೇರಿದಂತೆ ಇತರರಿದ್ದರು.