ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ!

| Published : May 21 2024, 12:33 AM IST

ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ!
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲೆಯ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ತುಂಗಭದ್ರಾ ನದಿ ನೀರು ಆಶ್ರಯಿಸಿರುವ ಈ ತಾಲೂಕುಗಳಲ್ಲಿ ಜಲಕ್ಷೋಭೆ ಉಂಟಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯ ಕುಡಿವ ನೀರಿನ ಸಮಸ್ಯೆ ವ್ಯಾಪಕವಾಗಿ ಉಲ್ಬಣವಾಗಿದ್ದು, ತುಂಗಭದ್ರಾ ನದಿಯನ್ನೇ ಆಶ್ರಯಿಸಿರುವ ಜಿಲ್ಲೆಯ 4 ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಜಲಕ್ಷೋಭೆ ಸಾರ್ವಜನಿಕರು ಕಣ್ಣೀರಿಡುವಂತೆ ಮಾಡಿದೆ. ನದಿ ಪಾತ್ರದಿಂದ (ಡಿಬಿಒಟಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ) ನೀರೆತ್ತುವ ಕಾರ್ಯ ಸ್ಥಗಿತಗೊಂಡು ವಾರ ಕಳೆದಿದ್ದು, ಇರುವ ಕೊಳವೆ ಬಾವಿಗಳನ್ನು ಆಶ್ರಯಿಸಿದ್ದಾರೆ.

ಗ್ರಾಪಂ ವ್ಯಾಪ್ತಿಗಳಲ್ಲಿರುವ ಕೊಳವೆ ಬಾವಿಗಳಲ್ಲಿ ಕಳೆದ ಸಾಲಿನ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ಸದ್ಯ ಕೊಳವೆಬಾವಿಗಳಿಂದ ಗ್ರಾಮಗಳಿಗೆ ಬೇಕಾಗುವಷ್ಟು ನೀರು ಸಂಗ್ರಹವಾಗದ ಹಿನ್ನೆಲೆಯಲ್ಲಿ ಗ್ರಾಪಂಗಳು ಸಹಿತ ಜನರಿಗೆ ನೀರು ಪೂರೈಸಲು ಸಾಧ್ಯವಾಗದೇ ಹೆಣಗಾಡುತ್ತಿದ್ದಾರೆ. ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಜಿಲ್ಲಾಡಳಿತ ಇನ್ನು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.

212 ಜನ ವಸತಿಗಳಿಗೆ ಸಮಸ್ಯೆ: ಗದಗ, ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ವ್ಯಾಪ್ತಿಗೆ ಒಳಪಡುವ 212 ಜನವಸತಿಗಳಲ್ಲಿ (ಗ್ರಾಮಗಳು) ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಗುರುತಿಸಿದೆ. ಈ ಹಿಂದೆ ಇದೇ ಇಲಾಖೆಯ ಮೂಲಕ ಡಿಬಿಒಟಿ ಪ್ಯಾಕೇಜ್-2ರ ಅಡಿಯಲ್ಲಿ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್‌ನಿಂದ 4 ತಾಲೂಕುಗಳ 212 ಜನವಸತಿಗಳಿಗೆ ಹಾಗೂ ಮುಂಡರಗಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಯಾವಾಗ ನದಿಯಲ್ಲಿ ನೀರು ಖಾಲಿಯಾಯಿತೋ ಅಲ್ಲಿಗೆ ಯೋಜನೆ ಸ್ಥಗಿತಗೊಂಡಿದೆ. ಈಗ ಆ ಎಲ್ಲ ಗ್ರಾಮಗಳೂ ಕೊಳವೆಬಾವಿಗಳನ್ನೇ ಆಶ್ರಯಿಸುವಂತಹ ಅನಿವಾರ್ಯತೆ ಸೃಷ್ಟಿಯಾಗಿದೆ.

273 ಖಾಸಗಿ ಕೊಳವೆಬಾವಿ ಗುರುತು: 4 ತಾಲೂಕುಗಳ ವ್ಯಾಪ್ತಿಯ ಗ್ರಾಪಂಗಳಲ್ಲಿ ಸದ್ಯಕ್ಕೆ 210ಕ್ಕೂ ಹೆಚ್ಚಿನ ಕೊಳವೆ ಬಾವಿಗಳಿದ್ದು, ಅವುಗಳಿಂದ ಸಂಗ್ರಹವಾಗುವ ನೀರನ್ನೇ ಆದ್ಯತೆಯ ಮೇಲೆ ಗ್ರಾಮಗಳಲ್ಲಿ ಪೂರೈಕೆ ಮಾಡಲಾಗುತ್ತಿದೆ. ಆದರೆ ನೀರಿನ ಬೇಡಿಕೆ ಮಾತ್ರ ಹೆಚ್ಚುತ್ತಲೇ ಇದ್ದು, ಅದನ್ನು ಪೂರೈಕೆ ಮಾಡಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಗದಗ ತಾಲೂಕಿನಲ್ಲಿ 55, ಮುಂಡರಗಿ ತಾಲೂಕಿನಲ್ಲಿ 55, ಶಿರಹಟ್ಟಿ ತಾಲೂಕಿನಲ್ಲಿ 70 ಮತ್ತು ಲಕ್ಷೇಶ್ವರ ತಾಲೂಕಿನಲ್ಲಿ 93 ಒಟ್ಟು 273 ಖಾಸಗಿ ಕೊಳವೆಬಾವಿ ಗುರುತಿಸಿ ಅವುಗಳನ್ನು ಜಿಲ್ಲಾ ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಒಳಪಡಿಸಿ ಕುಡಿಯಲು ಯೋಗ್ಯವಾದ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗ್ರಾಮೀಣ ಭಾಗದಲ್ಲಿ ಗಂಭೀರ: ಗದಗ ಬೆಟಗೇರಿ ಅವಳಿ ನಗರ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕು ಕೇಂದ್ರಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗಿಂತ ಇದೇ ತಾಲೂಕು ವ್ಯಾಪ್ತಿಯಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಹಳಷ್ಟು ಗಂಭೀರ ಸಮಸ್ಯೆ ಸೃಷ್ಟಿಸಿದೆ. ಗ್ರಾಮೀಣ ಭಾಗದಲ್ಲಿ ಜನ ಮತ್ತು ಜಾನುವಾರುಗಳಿಗೆ ನೀರು ಪೂರೈಕೆ ಮಾಡಲೇಬೇಕು. ಉತ್ತಮ ಮಳೆಯಾದಲ್ಲಿ ಕೃಷಿ ಹೊಂಡ, ಕೆರೆಗಳಲ್ಲಿ ನೀರು ಸಂಗ್ರಹವಾಗಿ ಜಾನುವಾರುಗಳ ನೀರಿನ ಸಮಸ್ಯೆ ನೀಗುತ್ತದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಮಳೆಯೂ ಇಲ್ಲ, ತುಂಗಭದ್ರಾ ನದಿಯಲ್ಲಿಯೂ ನೀರಿಲ್ಲ, ಕೊಳವೆಬಾವಿಗಳಲ್ಲಿಯೂ ನೀರಿಲ್ಲದಂತಹ ವಿಷಮ ಸ್ಥಿತಿ ಎದುರಾಗಿದೆ. ಹಮ್ಮಿಗಿ ಬ್ಯಾರೇಜ್‌ನಲ್ಲಿ ನೀರು ಖಾಲಿಯಾಗಿರುವ ಹಿನ್ನೆಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಪ್ರಸ್ತುತ ಲಭ್ಯವಿರುವ ಕೊಳವೆಬಾವಿಗಳ ಆಧಾರದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಗದಗ ತಾಲೂಕಿನ 7, ಮುಂಡರಗಿ ತಾಲೂಕಿನ 2, ಶಿರಹಟ್ಟಿ ತಾಲೂಕಿನ 1 ಗ್ರಾಮದಲ್ಲಿ ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗದಗ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಹಿರಿಯ ಅಧಿಕಾರಿ ಆನಂದ ಹೇಳುತ್ತಾರೆ.