ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಶುಕ್ರವಾರ ಅಕ್ಷರಶಃ ಸಂಭ್ರಮದಲ್ಲಿ ಮಿಂದೆದ್ದಿದ್ದರು. ಚಿತ್ರದುರ್ಗವನ್ನಾವರಿಸಿರುವ ಬರದ ನಡುವೆಯೂ ಅವರ ಮೊಗದಲ್ಲಿ ಮಂದಹಾಸವಿತ್ತು. ತಮ್ಮ ಕನಸಿನ ಕುಡಿವ ನೀರಿನ ಯೋಜನೆಯೊಂದು ಸಾಕಾರಗೊಳ್ಳುತ್ತಿರುವ ಕ್ಷಣಗಣನೆಯಲ್ಲಿ ಅವರಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಶುಕ್ರವಾರ ಅಕ್ಷರಶಃ ಸಂಭ್ರಮದಲ್ಲಿ ಮಿಂದೆದ್ದಿದ್ದರು. ಚಿತ್ರದುರ್ಗವನ್ನಾವರಿಸಿರುವ ಬರದ ನಡುವೆಯೂ ಅವರ ಮೊಗದಲ್ಲಿ ಮಂದಹಾಸವಿತ್ತು. ತಮ್ಮ ಕನಸಿನ ಕುಡಿವ ನೀರಿನ ಯೋಜನೆಯೊಂದು ಸಾಕಾರಗೊಳ್ಳುತ್ತಿರುವ ಕ್ಷಣಗಣನೆಯಲ್ಲಿ ಅವರಿದ್ದರು.

ವಾಣಿ ವಿಲಾಸ ಸಾಗರ ಜಲಾಶಯದಿಂದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ 367 ಕೋಟಿ ರು. ವೆಚ್ಚದ ಬೃಹತ್ ಯೋಜನೆ ಪೂರ್ಣಗೊಂಡಿದ್ದು, ಇನ್ನೂ ಒಂದೂವರೆ ತಿಂಗಳೊಳಗೆ ಸಂಪೂರ್ಣ ತಾಲೂಕಿಗೆ ನಿಯಮಿತವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಆರಂಭವಾಗಲಿದೆ.

ವಾಣಿ ವಿಲಾಸ ಸಾಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೃಹತ್ ‘ಜಾಕ್ ವೆಲ್’ ಹಾಗೂ ನೀರೆತ್ತುವ ಕಾಮಗಾರಿ ವೀಕ್ಷಣೆಗೆ ತಮ್ಮ ಬೆಂಬಲಿಗರ ದಂಡು ಕಟ್ಟಿಕೊಂಡು ಬಂದಿದ್ದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಹೊಳಲ್ಕೆರೆ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಮುಂದಿನ 2052ನೇ ಇಸವಿಯವರೆಗೆ ಹೆಚ್ಚಾಗಬಹುದಾದ ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ವಿನ್ಯಾಸಗೊಳಿಸಲಾಗಿದೆ. ಸುಮಾರು ಮೂರೂವರೆ ಯಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದರು.

ವಿವಿ ಸಾಗರದ ಜಾಕ್ ವೆಲ್ ಜಾಗದಿಂದ ನೀರೊಳಗೆ 100 ಅಡಿ ಆಳದಲ್ಲಿ ನೀರಿದೆ. ಆ ನೀರಿನ ಕೆಳಗೆ 40 ಅಡಿ ದಪ್ಪದ ಬಂಡೆಯಿದ್ದು, 45 ಅಡಿ ಬಂಡೆಯನ್ನು ಕೊರೆದು ಪೈಪ್ ಪಿಲ್ಲರ್‌ಗಳನ್ನು ಸ್ಥಾಪಿಸಲಾಗಿದೆ. ನೀರಿನ ಮಟ್ಟಕ್ಕಿಂತ ಮೇಲೆ 30 ಅಡಿ ಎತ್ತರದ ಪಿಲ್ಲರ್‌ಗಳನ್ನು ನಿರ್ಮಿಸಿ, ಒಟ್ಟು 170 ಅಡಿ ಎತ್ತರದ ಬೃಹತ್ ಜಾಕ್ ವೆಲ್ ಕಟ್ಟಡ ನಿರ್ಮಿಸಲಾಗಿದೆ ಎಂದರು.

ಯೋಜನೆಯಲ್ಲಿ 1,600 ಎಚ್.ಪಿ. ಸಾಮರ್ಥ್ಯದ ಪಂಪ್‍ಗಳು ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ಪಂಪ್‍ಗಳ ಪೈಕಿ ಎರಡು ನಿರಂತರವಾಗಿ ಚಾಲನೆಯಲ್ಲಿದ್ದರೆ ಮತ್ತೊಂದನ್ನು ತುರ್ತು ಸಂದರ್ಭಕ್ಕಾಗಿ ಕಾಯ್ದಿರಿಸಲಾಗಿದೆ. ಯಾವುದೇ ತಾಂತ್ರಿಕ ಅಡಚಣೆಯಾಗದಂತೆ 24 ಗಂಟೆಯೂ ವರ್ಷದ 365 ದಿನವೂ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ವಾಣಿ ವಿಲಾಸ ಸಾಗರದಿಂದ 25 ಕಿ.ಮೀ ದೂರದಲ್ಲಿರುವ ಹಾಲೇನಹಳ್ಳಿಯಲ್ಲಿರುವ 60 ಕೋಟಿ ರು. ವೆಚ್ಚದ ಫಿಲ್ಟರ್ ಘಟಕಕ್ಕೆ ನೀರನ್ನು ಹಾಯಿಸಿ, ನಂತರ ಗಟ್ಟಿಹೊಸಹಳ್ಳಿ ಗುಡ್ಡದಲ್ಲಿರುವ ಎತ್ತರದ ಪ್ರದೇಶಕ್ಕೆ ಲಿಫ್ಟ್ ಮಾಡಲಾಗುತ್ತದೆ. ಗಟ್ಟಿಹೊಸಹಳ್ಳಿಯಿಂದ ಇಡೀ ತಾಲೂಕಿಗೆ ಗುರುತ್ವಾಕರ್ಷಣೆ ಆಧಾರದ ಮೇಲೆ 625 ಕಿ.ಮೀ ಉದ್ದದ ಬೃಹತ್ ಪೈಪ್‍ಲೈನ್ ಜಾಲದ ಮೂಲಕ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.

ಹೊಳಲ್ಕೆರೆ ತಾಲೂಕಿನ ಗ್ರಾಮಗಳು ಹಾಗೂ ಹಟ್ಟಿಗಳು ಸೇರಿದಂತೆ ಒಟ್ಟು 400ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿಗೆ ಈ ಯೋಜನೆಯಿಂದ ನೀರು ತಲುಪಲಿದೆ. ಹೊಳಲ್ಕೆರೆ ಟೌನ್‍ಗೆ 25 ಕೋಟಿ ರು. ವೆಚ್ಚದಲ್ಲಿ ಪ್ರತ್ಯೇಕ ಪೈಪ್‍ಲೈನ್ ಜಾಲ ರೂಪಿಸಲಾಗಿದೆ ಎಂದರು.

ಯುವ ಮುಖಂಡ ಎಂ.ಸಿ.ರಘು ಚಂದನ್, ಕುಮಾರ್, ಸಿದ್ದೇಶ್, ಡಿ.ಸಿ.ಮೋಹನ್, ತಿಪ್ಪೇಸ್ವಾಮಿ, ಈಶಣ್ಣ, ರಮೇಶ್, ಪ್ರವೀಣ್, ರಂಗಸ್ವಾಮಿ, ನಿತಿನ್, ಬಂಗಾರಪ್ಪ, ನಾಗರಾಜ್ ಶಿವಪುರ, ಚಿತ್ರಹಳ್ಳಿ ದೇವರಾಜ್ ಇದ್ದರು.