₹36.61 ಕೋಟಿ ವೆಚ್ಚದ ಕುಡಿವ ನೀರಿನ ಯೋಜನೆಗೆ ಸಚಿವರು, ಶಾಸಕರಿಂದ ಚಾಲನೆ

| Published : Jan 22 2024, 02:16 AM IST

₹36.61 ಕೋಟಿ ವೆಚ್ಚದ ಕುಡಿವ ನೀರಿನ ಯೋಜನೆಗೆ ಸಚಿವರು, ಶಾಸಕರಿಂದ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ನೀರಾವರಿ ಅಭಿವೃದ್ಧಿಗಾಗಿ ತಲಾ ₹100 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ. ಆದರೆ, ಕೆ.ಆರ್.ಪೇಟೆ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಿಲ್ಲ. ಕಳೆದ ತಿಂಗಳು ಅಕ್ಕಿಹೆಬ್ಬಾಳಿನ ಸಭೆಯೊಂದರಲ್ಲಿ ತಾವು ತಾಲೂಕಿನ ಎಲ್ಲ ಅಪೂರ್ಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದೀರಿ. ತಾರತಮ್ಯ ಮಾಡದೆ ಅಗತ್ಯ ನೆರವು ಒದಗಿಸುವಂತೆ ಶಾಸಕ ಮಂಜು ಸಚಿವರಲ್ಲಿ ಮನವಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೇಂದ್ರ ಸರ್ಕಾರ ಪುರಸ್ಕೃತ ಅಮೃತ್ 2.0 ಅಡಿ ಪಟ್ಟಣದ ನೀರು ಸರಬರಾಜು ಅಭಿವೃದ್ಧಿಗಾಗಿ ₹36.61 ಕೋಟಿ ವೆಚ್ಚದ ಯೋಜನೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು.

ಪಟ್ಟಣ ಪುರಸಭೆ ಕಚೇರಿ ಪಕ್ಕದಲ್ಲಿ ನೀರು ಸರಬರಾಜು ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸ್ಥಳೀಯ ಶಾಸಕರೊಂದಿಗೆ ಜೊತೆಗೂಡಿ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಪಟ್ಟಣದ ಟಿ.ಬಿ.ಬಡಾವಣೆ ಮತ್ತು ಹೇಮಾವತಿ ಬಡಾವಣೆಗಳ ನಿವಾಸಿಗಳ ಸಮಸ್ಯೆಯನ್ನು ಪುರಸಭಾ ಸದಸ್ಯ ಕೆ.ಸಿ. ಮಂಜುನಾಥ್ ಎಲ್ಲ ನಿವೇಶನಗಳನ್ನು ಸಕ್ರಮಗೊಳಿಸಿದರೆ ಮನೆ ಕಂದಾಯ ಮತ್ತಿತರ ತೆರಿಗೆಗಳ ಮೂಲಕ ಪುರಸಭೆ ಅದಾಯದಲ್ಲಿ ಹೆಚ್ಚಳವಾಗಲಿದೆ ಎಂದು ಸಚಿವರಿಗೆ ಮನವಿ ಮಾಡಿದರು.

ಪಟ್ಟಣದ ಒಳಚರಂಡಿ ಯೋಜನೆ ಅಪೂರ್ಣಗೊಂಡಿರುವ ಬಗ್ಗೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪ್ರಸ್ತಾಪಿಸಿ ಒಳ ಚರಂಡಿ ಯೋಜನೆ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ತಾಲೂಕಿನ ಮಹತ್ವದ ನೀರಾವರಿ ಯೋಜನೆಗಳಾದ ಕಟ್ಟಹಳ್ಳಿ ಏತ ನೀರಾವರಿ, ಗೂಡೇ ಹೊಸಹಳ್ಳಿ ಏತ ನೀರಾವರಿ, ಹೊಸಹೊಳಲು ಕೆರೆ ಕೋಡಿ ಕಾಲುವೆ ಸೇರಿದಂತೆ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅಪೂರ್ಣ ನೀರಾವರಿ ಯೋಜನೆಗಳ ಬಗ್ಗೆ ಸಚಿವರೊಂದಿಗೆ ಶಾಸಕ ಎಚ್.ಟಿ.ಮಂಜು ಚರ್ಚಿಸಿದರು.

ಸರ್ಕಾರ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ನೀರಾವರಿ ಅಭಿವೃದ್ಧಿಗಾಗಿ ತಲಾ ₹100 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ. ಆದರೆ, ಕೆ.ಆರ್.ಪೇಟೆ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಿಲ್ಲ. ಕಳೆದ ತಿಂಗಳು ಅಕ್ಕಿಹೆಬ್ಬಾಳಿನ ಸಭೆಯೊಂದರಲ್ಲಿ ನೀವು ತಾಲೂಕಿನ ಎಲ್ಲ ಅಪೂರ್ಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದೀರಿ. ತಾರತಮ್ಯ ಮಾಡದೆ ಅಗತ್ಯ ನೆರವು ಒದಗಿಸುವಂತೆ ಶಾಸಕರು ಮನವಿ ಮಾಡಿದರು.

ಎಲ್ಲ ಅಹವಾಲು ಆಲಿಸಿದ ಸಚಿವ ಎನ್.ಚಲುವರಾಯಸ್ವಾಮಿ ತಾಲೂಕಿನ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.

ಈ ವೇಳೆ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಲೂಕು ಉಸ್ತುವಾರಿ ಚಿನಕುರಳಿ ರಮೇಶ್, ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು, ವಿಜಯ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕೆ.ಎಲ್.ದೇವರಾಜು, ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಪುರಸಭಾ ಸದಸ್ಯರಾದ ಕೆ.ಸಿ.ಮಂಜುನಾಥ್, ಡಿ.ಪ್ರೇಂಕುಮಾರ್, ಕೆ.ಆರ್.ರವೀಂದ್ರಬಾಬು, ಎಚ್.ಆರ್.ಲೋಕೆಶ್, ಮಹದೇವಿ, ಗಾಯಿತ್ರಿ, ಕೆ.ಎಸ್.ಸಂತೋಷ್ ಕುಮಾರ್, ಚಲುವರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ನಂದಿಶ್, ತಹಸೀಲ್ದಾರ್ ನಿಸರ್ಗಪ್ರಿಯ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.