ಸಾರಾಂಶ
ಯಲ್ಲಾಪುರ: ಪಟ್ಟಣದ ನಾಗರಿಕರಿಗೆ ಮುಂದಿನ ೫೦ ವರ್ಷಗಳನ್ನು ಗಮನದಲ್ಲಿಟ್ಟು ಶಾಶ್ವತ ಕುಡಿಯುವ ನೀರಿಗಾಗಿ ಬೊಮ್ಮನಳ್ಳಿ ಡ್ಯಾಮಿನಿಂದ ನೀರು ತರಲು ₹೯೬ ಕೋಟಿ ಮಂಜೂರಿ ಮಾಡಿಸಿ, ಕಾಮಗಾರಿಯ ಕಾರ್ಯಾರಂಭಗೊಳಿಸಲಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಆ. ೨೭ರಂದು ಪಟ್ಟಣದ ಪಪಂ ಸಭಾಭವನದಲ್ಲಿ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ವಿವಿಧ ಇಲಾಖೆಗಳ ಸಹಯೋಗದ, ಯೋಜನೆಯ ಮಹತ್ವದ ಕುರಿತು ಮಾತನಾಡಿದರು.ಈ ಯೋಜನೆಗೆ ಟೆಂಡರ್ ಆಗಿದ್ದು, ತಕ್ಷಣ ಕೆಲಸ ಪ್ರಾರಂಭಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಳಿಯಾಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹಳಿಯಾಳ ನೀರು ಸರಬರಾಜು ಮಂಡಳಿಯ ಎಇಇ ರಷೀದ ರಿತ್ತಿ ಮಾತನಾಡಿ, ಈ ಯೋಜನೆ ಬೊಮ್ಮನಳ್ಳಿಯಿಂದ ಯಲ್ಲಾಪುರದವರೆಗೆ ೩೪ ಕಿಮೀ ದೂರದಿಂದ ನೀರು ತರಬೇಕು. ಅದಕ್ಕೆ ಅಗತ್ಯವಾದ ಎಲ್ಲ ಮೂಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಪಟ್ಟಣದಲ್ಲಿ ಈಗಿರುವ ಟ್ಯಾಂಕ್ ಸೇರಿದಂತೆ ಇನ್ನೊಂದು ಟ್ಯಾಂಕ್ ನಿರ್ಮಿಸಲಾಗುತ್ತದೆ. ಇದರಿಂದ ೨೭ ಲಕ್ಷ ಲೀ. ನೀರು ಸಂಗ್ರಹ ಆಗಲಿದೆ. ಅಲ್ಲದೇ ಪೈಪ್‌ಲೈನ್ ಮಾಡಿದ ಜಾಗದಲ್ಲೆ ರಸ್ತೆ ಅಗೆದರೆ ಮೊದಲಿನಂತೆ ಮಾಡುವುದೂ ನಮ್ಮ ವ್ಯಾಪ್ತಿಯಲ್ಲೇ ಬರಲಿದೆ. ೨ ವರ್ಷದಲ್ಲಿ ಈ ಯೋಜನೆಯನ್ನು ಪೂರ್ತಿಗೊಳಿಸಬೇಕಾಗಿದೆ ಎಂದರು.ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಕಾಮಗಾರಿ ಆರಂಭಕ್ಕೆ ಅಗತ್ಯವುಳ್ಳ ಸಿದ್ಧತೆ ನಡೆಸಿ, ಅರಣ್ಯ ಇಲಾಖೆಯಲ್ಲಿ ಪೈಪ್‌ಲೈನ್ ಹಾಕಲು ಮರ ಕಡಿಯುವ ಅಗತ್ಯವಿಲ್ಲ. ಅರಣ್ಯ ಇಲಾಖೆ ತೊಂದರೆ ನೀಡದಂತೆ ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬರುವ ವರ್ಷದ ಕೊನೆಯೊಳಗೆ ನೀರು ಪೂರೈಕೆ ಆಗಬೇಕು. ಪಪಂ ಸದಸ್ಯರು ಮತ್ತೊಂದು ಸಭೆ ನಡೆಸಿ, ಅಗತ್ಯವಾದ ರೂಪುರೇಷೆಯ ಅಂತಿಮ ತೀರ್ಮಾನ ಕೈಗೊಳ್ಳಿ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾತನಾಡಿ, ಡೆಂಘೀ ಕುರಿತು ಪಟ್ಟಣದಲ್ಲಿ ಸೊಳ್ಳೆ ಹರಡದಂತೆ ಜಾಗೃತಿ ಮೂಡಿಸಲಾಗುತ್ತಿದೆಯಲ್ಲದೇ, ನೀರು ನಿಲ್ಲುವ ಸ್ಥಳಗಳ ಸರ್ವೆ ನಡೆಸಲಾಗುತ್ತಿದೆ. ನಮ್ಮ ಕ್ಲಿನಿಕ್ ಎಂಬ ಹೊಸ ಉಪಕೇಂದ್ರ ಉದ್ಯಮನಗರದಲ್ಲಿ ಸದ್ಯದಲ್ಲೇ ಪ್ರಾರಂಭಿಸುತ್ತಿದ್ದೇವೆ ಎಂದರು.
ಪಪಂನ ಆರೋಗ್ಯ ನಿರೀಕ್ಷಕ ಗುರು ಗಡಗಿ ಮಾತನಾಡಿ, ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ, ಬ್ಲೀಚಿಂಗ್, ಫಾಗಿಂಗ್ ನಡೆಸಲಾಗುತ್ತಿದೆ. ಹೆಚ್ಚುತ್ತಿರುವ ಪಟ್ಟಣದ ಜನಸಂಖ್ಯೆಗನುಗುಣವಾಗಿ ಪೌರಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.ಸದಸ್ಯ ರಾಧಾಕೃಷ್ಣ ನಾಯ್ಕ ಮಾತನಾಡಿ, ನಗರ ನೈರ್ಮಲ್ಯೀಕರಣದ ದೃಷ್ಟಿಯಿಂದ ಹೆಚ್ಚು ಪೌರಕಾರ್ಮಿಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಟ್ಟಣದ ರಸ್ತೆಗಳಲ್ಲಿ ಅಲ್ಲಲ್ಲಿ ಮೀನು ಮಾರಲಾಗುತ್ತಿದೆ. ಇದರಿಂದ ಆ ಪ್ರದೇಶ ಮಲಿನಗೊಂಡು, ಸೊಳ್ಳೆಗಳು ಹೆಚ್ಚಾಗಲು ಕಾರಣ. ಈ ಕುರಿತು ಸಂಬಂಧಿಸಿದವರಿಗೆ ತಿಳಿಸಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಪಪಂ ಸದಸ್ಯ ನಾಗರಾಜ ಅಂಕೋಲೇಕರ್ ಸಭೆಯ ಗಮನಕ್ಕೆ ತಂದರು.
ಕೃಷಿ ಇಲಾಖೆಯ ನಾಗರಾಜ ನಾಯ್ಕ, ತೋಟಗಾರಿಕೆ ಇಲಾಖೆಯ ಸುಭಾಸ ಹೆಗಡೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಸಿಡಿಪಿಒ, ಹಿಂದುಳಿದ ವರ್ಗ ಅಭಿವೃದ್ಧಿ, ಸಮಾಜ ಕಲ್ಯಾಣ, ಮೋಜಣಿ, ಶಿಕ್ಷಣ, ಹೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಯನ್ನು ಅಧಿಕಾರಿಗಳು ವಿವರಿಸಿದರು. ಆರಕ್ಷಕ ಇಲಾಖೆಯ ಉಪನಿರೀಕ್ಷಕ ಸಿದ್ದು ಗುಡಿ ಮಾತನಾಡುತ್ತಿದ್ದಾಗ ಮಧ್ಯೆಪ್ರವೇಶಿಸಿದ ಶಾಸಕ ಶಿವರಾಮ ಹೆಬ್ಬಾರ, ಪಟ್ಟಣದಲ್ಲಿ ಅನೇಕ ಕಡೆ ಗಾಂಜಾ ಸೇರಿದಂತೆ ಹಲವು ದುಶ್ಚಟಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೇ ಮನಬಂದಂತೆ ಕಾನೂನುಬಾಹಿರವಾಗಿ ವಾಹನ ಚಾಲನೆ ಮಾಡುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದರು.ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ ಅಂಗಡಿ, ತಹಸೀಲ್ದಾರ್ ಅಶೋಕ ಭಟ್ಟ, ಮುಖ್ಯಾಧಿಕಾರಿ ಸುನೀಲ ಗಾವಡೆ ವೇದಿಕೆಯಲ್ಲಿದ್ದರು.