ಹಾನಗಲ್ಲ ತಾಲೂಕಿನ ಸಮ್ಮಸಗಿ ಗ್ರಾಮದ ಹರಳಕೊಪ್ಪ ಉಪಗ್ರಾಮ ಕತ್ರಿಕೊಪ್ಪದಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿ 4 ವರ್ಷಗಳು ಕಳೆದರೂ ಮುಕ್ತಾಯವಾಗುವ ಸೂಚನೆ ಕಾಣುತ್ತಿಲ್ಲ. ಜನರ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ಕೇವಲ ನೂರು ಮನೆಗಳುಳ್ಳ ಪುಟ್ಟ ಹಳ್ಳಿ ಕತ್ರಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಜೆಜೆಎಂ ಪೈಪ್‌ಲೈನ್ ಹಾಗೂ ಮೇಲ್ಮಟ್ಟದ ಜಲಾಗಾರ ಕಾಮಗಾರಿ ಸ್ಥಗಿತಗೊಂಡು ನಾಲ್ಕು ವರ್ಷಗಳಾಗಿವೆ.

ಗುತ್ತಿಗೆದಾರರಿಗೆ ನೋಟಿಸ್ ಜಾರಿಯಾದರೂ ಏನೂ ಪ್ರಯೋಜವಾಗಿಲ್ಲ. ಗ್ರಾಮಸ್ಥರ ಗೋಳು ಅಧಿಕಾರಿಗಳು ಕೇಳುತ್ತಿಲ್ಲ.

ಹಾನಗಲ್ಲ ತಾಲೂಕಿನ ಸಮ್ಮಸಗಿ ಗ್ರಾಮದ ಹರಳಕೊಪ್ಪ ಉಪಗ್ರಾಮ ಕತ್ರಿಕೊಪ್ಪದಲ್ಲಿ ೩೦೦ ಜನಸಂಖ್ಯೆ ಇದೆ. ೧೦೦ ಮನೆಗಳಲ್ಲಿ ೮೦ ಮನೆಗಳಿಗೆ ಗ್ರಾಪಂ ಕುಡಿಯುವ ನೀರಿನ ನಳದ ವ್ಯವಸ್ಥೆ ಇದೆ. ಇದಕ್ಕಾಗಿ ಒಂದೇ ಕೊಳವೆಬಾವಿ ಇದೆ. ₹೩೨ ಲಕ್ಷಗಳ ಮೇಲ್ಮಟ್ಟದ ಜಲಾಗಾರ ನಿರ್ಮಾಣಕ್ಕೆ ಹಾಗೂ ಪೈಪ್‌ಲೈನ್ ಕಾಮಗಾರಿ ಆರಂಭವಾಗಿ ೪ ವರ್ಷಗಳಾದರೂ ಇನ್ನೂ ಅದು ಪೂರ್ಣಗೊಳ್ಳುವ ಯಾವುದೇ ಸೂಚನೆಗಳಿಲ್ಲ. ಇದಕ್ಕಾಗಿ ಅಧಿಕಾರಿಗಳು ಜನಪ್ರತಿನಿಧಿಗಳಲ್ಲಿ ಗ್ರಾಮಸ್ಥರು ಮಾಡಿದ ಮನವಿ ಏನೂ ಪ್ರಯೋಜನವಾಗಿಲ್ಲ. ಜೆಜೆಎಂ ಪೈಪ್‌ಲೈನ್ ಕಾಮಗಾರಿ ಇನ್ನೂ ಶೇ. ೭೫ರಷ್ಟು ಬಾಕಿ ಇದೆ. ಮೇಲ್ಮಟ್ಟದ ಜಲಾಗಾರ ಕಾಮಗಾರಿ ಪೂರ್ಣ ಕಳಪೆಯಾಗಿದೆ, ಇದರ ಕ್ಯೂರಿಂಗ್‌ ಕೂಡ ಸರಿಯಾಗಿಲ್ಲ ಎಂದು ಗುತ್ತಿಗೆದಾರರ ಗಮನ ಸೆಳೆದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇದಕ್ಕೆ ಸರಿಯಾದ ಕ್ಯೂರಿಂಗ್ ಆಗಿಲ್ಲ, ಇದಕ್ಕಾಗಿ ಜನರು ಮಾಡಿದ ಯಾವುದೇ ಮನವಿಯನ್ನು ಯಾರೂ ಪರಿಗಣಿಸಿಲ್ಲ.

ನೋಟಿಸ್: ಇದರ ಗುತ್ತಿಗೆದಾರರಿಗೆ ಇಲಾಖೆ ನೋಟಿಸ್‌ ಕೂಡ ನೀಡಿದೆ. ಗುತ್ತಿಗೆದಾರರು ಒಂದು ತಿಂಗಳಿನಲ್ಲಿ ಕಾಮಗಾರಿ ಮುಗಿಸುವುದಾಗಿ ಮಾರ್ಚ್‌ ತಿಂಗಳಿನಲ್ಲೇ ಬರೆದು ಕೊಟ್ಟಿದ್ದರೂ ಮತ್ತೆ ಗುತ್ತಿಗೆದಾರರು ಮರಳಿ ಬಂದಿಲ್ಲ. ಕೆಲಸ ಮಾತ್ರ ಅಲ್ಲಿಗೇ ನಿಂತಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಶಿಸ್ತು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

ಕೊಳವೆಬಾವಿ ನೀರೆತ್ತುವ ವ್ಯವಸ್ಥೆ ಕೆಟ್ಟರೆ ಮತ್ತೆ ಸರಿಪಡಿಸುವವರೆಗೂ ಇಡೀ ಊರು ನೀರಿಲ್ಲದೆ ಪರದಾಡುವಂತಾಗುತ್ತದೆ. ಅದಕ್ಕಾಗಿಯೇ ನಿರ್ಮಾಣವಾಗಬೇಕಾದ ಮೇಲ್ಮಟ್ಟದ ಜಲಾಗಾರ ಪೂರ್ಣಗೊಳ್ಳದೆ ನಿಂತಿದೆ. ಇನ್ನೊಂದು ಕೊಳವೆಬಾವಿ ಬೇಕು ಎಂಬ ಬೇಡಿಕೆಗೂ ಯಾವುದೇ ಸ್ಪಂದನೆ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಸಿಕ್ಕಿಲ್ಲ.

ನಮಗಂತೂ ಸಾಕಾಗಿದೆ: ಅರ್ಧಂಬರ್ಧ ಕೆಲಸ ಮಾಡಿ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ಒಂದು ಬಾರಿ ಸಭೆ ಮಾಡಿ ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇನೆ ಎಂದು ಹೇಳಿ ಹೋದವರು ಬಂದಿಲ್ಲ. ಕೆಲಸ ಅಲ್ಲಿಗೇ ನಿಂತಿದೆ. ನಮಗಂತೂ ಸಾಕಾಗಿದೆ. ಗುಡ್ಯಾಗ ಕುಂತ ಮಾತು ಕೊಟ್ಟ ಗುತ್ತಿಗೆದಾರ ಈಗ ಎಲ್ಲಿರುವನೋ ನಮಗೆ ಗೊತ್ತಿಲ್ಲ. ನಮಗೆ ಬೇಡವೇ ಬೇಡ ಎಂಬ ಭಾವನೆ ಬಂದಿದೆ. ಅಧಿಕಾರಿಗಳೂ ತಮ್ಮ ಅಸಹಾಯಕತೆ ತೋರಿಸುತ್ತಾರೆ ಎಂದು ಗ್ರಾಪಂ ಮಾಜಿ ಸದಸ್ಯ ಫಕ್ಕೀರಪ್ಪ ಗೊಲ್ಲರ ಹೇಳುತ್ತಾರೆ.ಕ್ರಮ ಜರುಗಿಸಲಾಗುತ್ತದೆ: ಕತ್ರಿಕೊಪ್ಪದ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ. ಆದರೆ ನೀಡಿದ ಸಮಯದಲ್ಲಿ ಕಾಮಗಾರಿ ಮಾಡುತ್ತಿಲ್ಲ. ಗುತ್ತಿಗೆದಾರರನ್ನು ಬದಲಿಸುವುದೋ ಅಥವಾ ಅದೇ ಗುತ್ತಿಗೆದಾರ ಬೇಗ ಕಾಮಗಾರಿ ಪೂರ್ಣಗೊಳಿಸಲು ಶಿಸ್ತುಕ್ರಮ ಜರುಗಿಸುವುದೋ ಎಂದು ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ಜರುಗಿಸಲಾಗುತ್ತದೆ ಎಂದು ಜೆಜೆಎಂ ಕಾರ್ಯಪಾಲನಾ ಅಧಿಕಾರಿ ಚಂದ್ರಶೇಖರ ನೆಗಳೂರು ಹೇಳಿದರು.