ಆರೋಪಿ ಬಡವನಾ? ಹಾಗಾದರೆ 6 ತಿಂಗಳು ಜೈಲಿಗೆ ಹೋಗಲಿ. ಆಗ 15 ಲಕ್ಷ ರು. ಮಾಫ್‌ ಆಗುತ್ತೆ. ಕಠಿಣ ಶಿಕ್ಷೆ ಇಲ್ಲದಿದ್ದರೆ ಕಾಲು ಮೇಲೆ ಕಾಲು ಹಾಕಿಕೊಂಡು ಆರಾಮಾಗಿ ಕೂತಿದ್ದರೆ ಸಾಕು, ಹೊತ್ತೊತ್ತಿಗೆ ಟೈಮಿಗೆ ಸರಿಯಾಗಿ ಊಟ ಬರುತ್ತೆ.

ನಾನು ಬಡವ, ಲಂಗೋಟಿ ಗಿರಾಕಿ. ಹಣ ಕೊಡಲಾಗದು ಎಂದರೆ, ಜೈಲಿಗೆ ಕಳಿಸ್ತೀನಿ. ಜೈಲಲ್ಲಿ ಬುಧವಾರ ಸ್ವೀಟು. ಶುಕ್ರವಾರ ಮಟನ್‌ ತಿನ್ಕೊಂಡು ಇಂಡಿಯಾ-ಪಾಕಿಸ್ತಾನ ಮ್ಯಾಚ್‌ ನೋಡ್ಕೊಂಡಿರಿ!

ಇದು... ಚೆಕ್‌ ಬೌನ್ಸ್‌ ಪ್ರಕರಣ ವಿಚಾರಣೆ ವೇಳೆ ವ್ಯಕ್ತಿಯೊಬ್ಬರಿಂದ 15 ಲಕ್ಷ ಪಡೆದು, ವಾಪಸ್‌ ನೀಡಲು ನಾನು ಬಡವ, ಹಣವಿಲ್ಲ ಎಂದು ಸಬೂಬು ಹೇಳಿದ ಆರೋಪಿಗೆ ನ್ಯಾಯಾಧೀಶರು ನೀಡಿದ ಸಲಹೆ.

ಪ್ರಕರಣದ ವಿಚಾರಣೆ ವೇಳೆ ಆರೋಪಿ ಪರ ವಕೀಲರನ್ನುದ್ದೇಶಿಸಿ, ನೋಡ್ರಿ... ಹಣ ಪಡೆದಿದ್ದೀರಿ. ಏಳು ವರ್ಷ ಆಗಿದೆ. ವಾಪಸ್‌ ನೀಡದೆ ಟಕಾಯಿಸಿದ್ದೀರಿ. ಈಗ ಹಣ ಕೊಡಿ ಎಂದು ನ್ಯಾಯಾಧೀಶರು ಸೌಮ್ಯವಾಗಿ ಹೇಳಿದರು. ಆಗ ಆದರೆ, ಆರೋಪಿ ಪರ ವಕೀಲರು, ಸ್ವಾಮಿ ಆರೋಪಿ ಬಡವ. ವಾಪಸ್‌ ಕೊಡಲು ಏನಿಲ್ಲ ಎಂದರು.

ಇದರಿಂದ ಕೆರಳಿದ ನ್ಯಾಯಾಧೀಶರು, ಆರೋಪಿ ಬಡವನಾ? ಹಾಗಾದರೆ 6 ತಿಂಗಳು ಜೈಲಿಗೆ ಹೋಗಲಿ. ಆಗ 15 ಲಕ್ಷ ರು. ಮಾಫ್‌ ಆಗುತ್ತೆ. ಕಠಿಣ ಶಿಕ್ಷೆ ಇಲ್ಲದಿದ್ದರೆ ಕಾಲು ಮೇಲೆ ಕಾಲು ಹಾಕಿಕೊಂಡು ಆರಾಮಾಗಿ ಕೂತಿದ್ದರೆ ಸಾಕು, ಹೊತ್ತೊತ್ತಿಗೆ ಟೈಮಿಗೆ ಸರಿಯಾಗಿ ಊಟ ಬರುತ್ತೆ. ಮನೆಯಲ್ಲಾದರೂ ಊಟ ಕೊಡೋದು ಲೇಟ್‌ ಆಗಬಹುದು. ಜೈಲಿನಲ್ಲಿ 12 ಗಂಟೆ ಎಂದರೆ... 12 ಗಂಟೆಗೆ ಊಟ ಬರುತ್ತೆ. ಬುಧವಾರ ಸ್ವೀಟು, ಶುಕ್ರವಾರ ಮಟನ್ನು. ಊಟ ಮಾಡಿಕೊಂಡು ಟಿಪ್‌-ಟಾಪ್‌ ಆಗಿ ಓಡಾಡಿಕೊಂಡು ಇರಬಹುದು ಎಂದರು.

ಇನ್ನು ಟಿ.ವಿ, ಪೋನ್‌, ಪತ್ರಿಕೆ ಎಲ್ಲಾ ಇರುತ್ತೆ. ಇಂಡಿಯಾ-ಪಾಕಿಸ್ತಾನ್ ಮ್ಯಾಚ್‌ ತೋರಿಸ್ತಾರೆ. 15 ಲಕ್ಷ ಸಹ ಉಳಿಯುತ್ತೆ. ಈ ಹಿಂದೆ ಒಬ್ಬರು ಬೆಳಗ್ಗೆ ಬಂದು ನಾನು ಬಡವ, ಲಂಗೋಟಿ ಗಿರಾಕಿ. ವಾಪಸ್‌ ಕೊಡಲು ಹಣವಿಲ್ಲ ಎಂದರು. ನಾನು, ಆಯ್ತು ಜೈಲಿಗೆ ಹೋಗಿ ಎಂದೆ. ಆತನನ್ನು ಕಸ್ಟಡಿಗೆ ಪಡೆಯಲು ಪೊಲೀಸರಿಗೆ ಸೂಚಿಸಿದೆ. ಸಂಜೆ ಆಗುವಷ್ಟರಲ್ಲಿ 11 ಲಕ್ಷ ಹಣ ತಂದಿಟ್ಟರು ಎಂದು ಹೇಳಿದರು.

ಮುಂದುವರೆದ ನ್ಯಾಯಾಧೀಶರು ಜನರು ಅರ್ಥ ಮಾಡಿಕೊಳ್ಳಬೇಕು. ಹಣ ಪಡೆದ ನಂತರ ವಾಪಸ್‌ ಕೊಡದಿದ್ದರೆ ಏನಾಗುತ್ತೆ? ಕಾನೂನು ಅಡಿ ಏನೆಲ್ಲಾ ಕಠಿಣ ಕ್ರಮ ಜರುಗಿಸಬಹುದು ಅಂತ. ಬಡವ ಸ್ವಾಮಿ ಎಂದು ನಮ್ಮತ್ರ ಹೇಳಬೇಡಿ. ಸಮಯ ಕೊಡ್ತೀನಿ. ಅಷ್ಟರಲ್ಲಿ ಹಣ ವಾಪಸ್‌ ಕೊಡ್ತೀರೋ, ಇಲ್ಲವೋ ಅಂತ ಹೇಳಿ. ನಿಮ್ಮ ಉತ್ತರ ಕೇಳಿ, ಕೇಸ್‌ ಕ್ಲೋಸ್‌ ಮಾಡ್ತೀನಿ ಎಂದು ಹೇಳಿ ವಿಚಾರಣೆ ಮುಂದೂಡಿದರು. ನ್ಯಾಯಾಧೀಶರ ಈ ಮಾತುಗಳನ್ನು ಕೇಳಿ, ಕೋರ್ಟ್‌ ಹಾಲ್‌ನಲ್ಲಿದ್ದವರೆಲ್ಲ ಜೋರಾಗಿ ನಕ್ಕರು.

25 ವರ್ಷದ ಹಳೆ ಫೋಟೋ ಹಾಕಿ ಯುವತಿ ಮೋಡಿ ಮಾಡಿರಬೇಕು...

ನಿಮ್ಮ ಕಕ್ಷಿದಾರನ ವಯಸ್ಸು 65. ಆದರೂ ಟಿಂಡರ್‌ ಆ್ಯಪ್‌ ಅಕೌಂಟ್‌ ಹೇಗೆ ಕ್ರಿಯೇಟ್‌ ಮಾಡಿದ್ರು? ನನ್ನ ಪ್ರಕಾರ ಅಕೌಂಟ್‌ ಪ್ರೊಫೈಲ್‌ಗೆ 25 ವರ್ಷದ ಹಳೆಯ ಪೋಟೋ ಹಾಕಿರಬೇಕು! ಡೇಟಿಂಗ್‌ ಆ್ಯಪ್‌ ಟಿಂಡರ್‌ನಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡಿ, ಯುವತಿಯನ್ನು ಪರಿಚಯಿಸಿಕೊಂಡು ಹೋಟೆಲ್‌ಗೆ ಕರೆದು, ಜ್ಯೂಸ್‌ನಲ್ಲಿ ಮತ್ತು ಬರಿಸುವ ಪೌಂಡರ್‌ ಹಾಕಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರಬೇಕು...

ಹೀಗೆಂದು ಪ್ರಕರಣವೊಂದರ ವಿಚಾರಣೆ ವೇಳೆ ಆರೋಪಿ ವಿರುದ್ಧ ನ್ಯಾಯಾಧೀಶರು ಸಂಶಯ ವ್ಯಕ್ತಪಡಿಸಿದ ಪ್ರಸಂಗ ಇತ್ತೀಚೆಗೆ ನಡೆಯಿತು.

ತನ್ನ ಮೇಲಿನ ಅತ್ಯಾಚಾರ ಪ್ರಕರಣ ರದ್ದು ಕೋರಿ ಆರೋಪಿಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನನ್ನ ಕಕ್ಷಿದಾರನ ಮೇಲೆ ಆರೋಪ ಸುಳ್ಳು ಎಂದು ಆರೋಪಿ ವಕೀಲರು ವಾದಿಸಿದರು.

ಆಗ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಆರೋಪ ಸುಳ್ಳೋ..ನಿಜವೋ ಮುಂದೆ ಪರಿಶೀಲಿಸೋಣ. ಅದಕ್ಕೂ ಮುನ್ನ ನಿಮ್ಮ ಕಕ್ಷಿದಾರನ ವಯಸ್ಸು 65. ಈ ವಯಸ್ಸು ಹೇಳಿಕೊಂಡು ಟಿಂಡರ್‌ ಆ್ಯಪ್‌ ಅಕೌಂಟ್‌ ಹೇಗೆ ಕ್ರಿಯೇಟ್‌ ಮಾಡಿದರು ಎಂದು ಕೇಳಿದರು. ಅದಕ್ಕೆ ಆರೋಪಿ ಪರ ವಕೀಲರು, ಸ್ವಾಮಿ..ಅದು ನನಗೆ ಗೊತ್ತಿಲ್ಲ ಎಂದರು.

ಆಗ ನ್ಯಾಯಾಧೀಶರು, 65 ವರ್ಷ ಎಂದು ಹೇಳಿಕೊಂಡರೆ ಸಂತ್ರಸ್ತೆ ಭೇಟಿಗೆ ಬರಲು ಸಾಧ್ಯವಿದೆಯೇ? ನನ್ನ ಪ್ರಕಾರ ಆರೋಪಿಯು 25 ವರ್ಷದ ಹಿಂದಿನ ತನ್ನ ಫೋಟೋವನ್ನು ಪ್ರೊಫೈಲ್‌ಗೆ ಹಾಕಿರ್ತಾರೆ. ಪ್ರೋಫೈಲ್‌ ಅಲ್ಲಿ ಆರೋಪಿ ಯಂಗ್‌ ಆಗಿರುವುದು ಕಂಡು ಭೇಟಿಗೆ ಸಂತ್ರಸ್ತೆ ಒಪ್ಪಿರಬಹುದು ಎಂದರು.

ಆರೋಪಿ ಪರ ವಕೀಲರು, ಸ್ವಾಮಿ. ಟಿಂಡರ್‌ ಆ್ಯಪ್ ಅಕೌಂಟ್‌ ಕ್ರಿಯೇಟ್ ಮಾಡೋಕೆ ವಯೋಮಿತಿ ಎಷ್ಟು ಎಂಬುದು ನನಗೆ ತಿಳಿದಿಲ್ಲ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಓಹೋ.. ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿ ಎಫ್‌ಐಆರ್‌ ಪ್ರತಿ ಪರಿಶೀಲಿಸಿದರು. ಅದರಲ್ಲಿ ‘ಪ್ರೋಫೈಲ್‌ ಫೋಟೋದಲ್ಲಿರುವ ವ್ಯಕ್ತಿಗೂ, ನನ್ನನ್ನು ಭೇಟಿಯಾದ ವ್ಯಕ್ತಿಗೂ ವ್ಯತ್ಯಾಸವಿದೆ’ ಎಂದು ಸಂತ್ರಸ್ತೆ ಹೇಳಿಕೆ ದಾಖಲಿಸಿರುವುದನ್ನು ಗಮನಿಸಿದರು.

ಆ ಹೇಳಿಕೆ ಓದಿದ ನ್ಯಾಯಾಧೀಶರು, ‘ವಕೀಲರೇ ನಾನು ಹೇಳಿಲ್ಲವೇ. ನಿಮ್ಮ ಕಕ್ಷಿದಾರ 25 ವರ್ಷಗಳ ಹಿಂದಿನ ಫೋಟೋ ಅನ್ನು ಫ್ರೋಫೈಲ್‌ಗೆ ಹಾಕಿದ್ದಾರೆ. ನನ್ನ ಅನುಮಾನ ನಿಜವಾಯಿತು ನೋಡಿ’ ಎಂದು ಹೇಳಿ ಜೋರಾಗಿ ನಕ್ಕರು. ಈ ಪ್ರಸಂಗ ನೋಡಿದವರೆಲ್ಲರೂ ಗೊಳ್‌ ಎಂದು ನಕ್ಕರು.

ಅಂತಿಮವಾಗಿ ಪ್ರಕರಣದಲ್ಲಿನ ಆರೋಪ ಅತ್ಯಂತ ಹೀನವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ಆರೋಪಿಯ ಅರ್ಜಿ ವಜಾಗೊಳಿಸಿದರು.

-ವೆಂಕಟೇಶ್‌ ಕಲಿಪಿ