ಮಠದೊಳಗೆ ರಾಜಕೀಯ ಪಕ್ಷ ಬರಬಾರದು: ಸಿದ್ದಣ್ಣ ಲಂಗೋಟಿ

| Published : Aug 25 2025, 01:00 AM IST

ಸಾರಾಂಶ

ಹಾವೇರಿ ನಗರದ ಸಿಂದಗಿಮಠದಲ್ಲಿ ಬಸವ ಬಳಗದಿಂದ ಭಾನುವಾರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಸಾಹಿತಿ ಪ್ರೊ. ಸಿದ್ದಣ್ಣ ಲಂಗೋಟಿ ಭಾಗವಹಿಸಿದ್ದರು.

ಹಾವೇರಿ: ಅಂದು ಬಸವಣ್ಣನಿಂದ ಎಲ್ಲರೂ ಸತ್ಯ ಶುದ್ಧ ಕಾಯಕ ಮಾಡುತ್ತಿದ್ದರು. ಇಂದು ರಾಜಕಾರಣಿಗಳು, ರಾಜಕೀಯ ಪಕ್ಷವನ್ನು ಮಠದೊಳಗೆ ತರುತ್ತಿದ್ದಾರೆ. ಅವರು ಮಠದೊಳಗೆ ಹೋಗುವಾಗ ರಾಜಕೀಯ ಪಕ್ಷ ಮರೆಯಬೇಕು ಎಂದು ಸಾಹಿತಿ ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.

ನಗರದ ಸಿಂದಗಿಮಠದಲ್ಲಿ ಬಸವ ಬಳಗದಿಂದ ಭಾನುವಾರ ಏರ್ಪಡಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜಕಾರಣಿಗಳು ಮಠದೊಳಗೆ ಭಕ್ತಿ ಪಕ್ಷವಾಗಿ ಹೆಜ್ಜೆ ಇರಿಸಬೇಕು. ಸ್ವಾಮೀಜಿಗಳು ಸಹ ರಾಜಕಾರಣ ಮಾಡಬಾರದು. ಯಾರೇ ದೊಡ್ಡ ರಾಜಕಾರಣಿ ಬಂದರೂ, ಜನಸಾಮಾನ್ಯರ ಅಭಿವೃದ್ಧಿ ಮಾಡುವಂತೆ ಅವರಿಗೆ ಹೇಳಬೇಕು. ಅದನ್ನು ಬಿಟ್ಟು ತಾವೇ ರಾಜಕಾರಣ ಮಾಡಬಾರದು ಎಂದರು.

ಮಾನವ ಕುಲ ಒಂದಾಗಿ ಬಾಳಬೇಕು ಎಂದು ಜಗತ್ತಿನ ಎಲ್ಲ ಧರ್ಮಗಳು ಹೇಳಿವೆ. ಆದರೆ, ನಾವು ಇಂದು ಧರ್ಮ, ಜಾತಿ ಹೆಸರಿನಲ್ಲಿ ಕಚ್ಚಾಡುತ್ತಿದ್ದೇವೆ. ಬಸವಣ್ಣ ಅವರು ಹೇಳಿದ ವಿಶ್ವ ಮಾನವ ಸಂದೇಶ ಆಚರಣೆ ಜಾರಿಗೆ ಬಂದಿಲ್ಲವೆಂದು ಕುವೆಂಪು ಸಹ ನೋವಿನಿಂದ ಹೇಳಿದ್ದರು. ಇಂದು ಸಹ ಬಸವಣ್ಣನವರ ತತ್ವ ಪಾಲಿಸುವ ಜನರು ಸಿಗುವುದು ವಿರಳವಾಗಿದೆ. ಲಿಂಗಾಯತರಲ್ಲಿಯೇ 104 ಜಾತಿ ವಿಚಾರದಲ್ಲಿ ಹರಿದು ಹಂಚಿ ಹೋಗಿದ್ದೇವೆ. ನಾವೆಲ್ಲರೂ ಆತ್ಮಾವಲೋಕ ಮಾಡಿಕೊಳ್ಳಬೇಕು. ಶರಣರು ಎಲ್ಲವನ್ನೂ ನಿಷ್ಠುರವಾಗಿ ಹೇಳಿದ್ದಾರೆ. ಆದರೂ ಲಿಂಗಾಯತದಲ್ಲಿ ಬಣಜಿಗ, ನೇಕಾರರ ಸಂಘ ಸೇರಿ 104 ಜಾತಿಗೊಂದು ಸಂಘ ಬಂದಿವೆ. ಇವರೆಲ್ಲ ಲಿಂಗಾಯತರು ಆಗುವುದು ಯಾವಾಗ ಎಂದು ಪ್ರಶ್ನಿಸಿದರು.

ಬಸವೇಶ್ವರರ ವಚನಗಳು ಮಾನವೀಯತೆಯ ಭಂಡಾರ. ಇಡೀ ಮಾನವ ಕುಲಕ್ಕೆ ಬೆಳಕು ಕೊಡುವ ವಿಚಾರಗಳನ್ನು ಹೊಂದಿವೆ. ಇಂಥ ಬಸವಣ್ಣ ಹಾಗೂ ಶರಣರ ವಚನಗಳನ್ನು ಈಗಾಗಲೇ 11 ವಿದೇಶಿ ಭಾಷೆಗಳಿಗೆ ಅನುವಾದಿಸಲಾಗಿದೆ. ಇನ್ನು 9 ಭಾಷೆಗಳಿಗೆ ಅನುವಾದಿಸುವುದು ಬಾಕಿಯಿದೆ. ನಾನು 98 ಗ್ರಂಥ ಬರೆದಿದ್ದೇನೆ. ಸಾಹಿತ್ಯದ ಮೊದಲ ಪುಸ್ತಕವೇ ಅಲ್ಲಮ ಪ್ರಭು ಬಗ್ಗೆ ಬರೆದಿದ್ದೇನೆ. ಆದರೆ, ಅದರಲ್ಲಿಯೂ ಅಲ್ಲಮಪ್ರಭು ಅವರ ಮುಪ್ಪಿನ ಕಾಲದ ಬಗ್ಗೆ ಮಾತ್ರ ಬರೆದಿದ್ದೇನೆ ಎಂದು ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.

ಸಾಹಿತಿ ಕಲ್ಯಾಣಮ್ಮ ಲಂಗೋಟಿ ಮಾತನಾಡಿ, ಬಸವಣ್ಣನವರು ದೇವರ ಉಪಾಸನೆ ಕಂಡುಹಿಡಿದರು. ಅಕ್ಕ ನಾಗಮ್ಮಳಿಗೆ ಇಷ್ಟಲಿಂಗ ದೀಕ್ಷೆ ನೀಡಿದರು. ಇಷ್ಟಲಿಂಗ ಪೂಜೆ, ದಾಸೋಹ, ಕಾಯಕ ಮೈಗೂಡಿಸಿಕೊಂಡರು. ಸತ್ಯ ಶುದ್ಧವಾದ ಕಾಯಕ ತತ್ವ, ನಿತ್ಯ ಲಿಂಗಾರ್ಚನೆ, ನಿತ್ಯ ದಾಸೋಹದ ಪ್ರಾಮುಖ್ಯತೆ ತಿಳಿಸಿದರು ಎಂದರು.

ಭೇದ ಭಾವದ ರೋಗದಿಂದ ಬಳಲುತ್ತಿದ್ದ ಸಮಾಜವನ್ನು ನಿರೋಗಿ ಮಾಡಲು ಸತ್ಯ ಶುದ್ಧ ಕಾಯಕ ತತ್ವ ತಂದರು. ದಾನದ ವಸ್ತುವಾಗಿದ್ದ ಮಹಿಳೆಗೆ ಹೊಸ ಬದುಕು ನೀಡಿದವರು ಬಸವಣ್ಣ. ಹೆರಿಗೆ, ಅಡುಗೆ ಮನೆಗೆ ಸೀಮಿತವಾದ ಮಹಿಳೆಗೆ ಅರಿವಿನ ಮಹಾಮನೆ ಕೊಟ್ಟರು. ಇಂದಿನ ಮಹಿಳೆಯರು ನಿತ್ಯವೂ ಬಸವಣ್ಣನವರನ್ನು ನೆನೆಯಬೇಕು ಎಂದರು.

ಸತ್ಯ ಶುದ್ಧ ಕಾಯಕದಿಂದ ಬಂದ ಹಣದಲ್ಲಿ ಪ್ರಸಾದ ಮಾಡಬೇಕು. ಪರ ಧನ ಬಳಸಬಾರದು. ಅಡ್ಡಮಾರ್ಗದಿಂದ ಇನ್ನೊಬ್ಬರ ಸಂಪತ್ತು ಕಬಳಿಸಬಾರದು. ತನ್ನ ಸತಿ ಇರುವಾಗ ಪರಸ್ತ್ರೀಯನ್ನು ವಿಕಾರ ದೃಷ್ಟಿಯಿಂದ ನೋಡುವುದು ಒಳ್ಳೆಯದಲ್ಲ. ನಮ್ಮೊಳಗಿನ ದೈವವನ್ನು ಕಾಣಸಬೇಕು. ಹೊರಗಡೆ ದೇವರನ್ನು ಹುಡುಕಿ, ಸಮಯ, ಶ್ರಮ, ಹಣ ವ್ಯರ್ಥ ಮಾಡಬಾರದು ಎಂದರು.

ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಆರ್. ಮಾಗಾವಿ, ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ಕೆ.ಎಂ. ವಿಜಾಪುರ, ಜಗದೀಶ ಹತ್ತಿಕೋಟಿ, ಶಿವಾನಂದ ಹೊಸಮನಿ, ಶಿವಬಸಪ್ಪ ಮುದ್ದಿ, ಮುರುಗೆಪ್ಪ ಕಡೆಕೊಪ್ಪ ಇದ್ದರು. ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು.