ಕುಡಿಯುವ ನೀರಿನ ಸಮಸ್ಯೆ ಆಗದಿರಲಿ: ಡಿಸಿ

| Published : Apr 24 2025, 12:06 AM IST

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 153 ಗ್ರಾಮ ಪಂಚಾಯಿತಿ ಇದ್ದು 722 ಗ್ರಾಮಗಳಿವೆ. ಇದರಲ್ಲಿ 472 ಗ್ರಾಮಗಳಿಗೆ ಡಿಬಿಒಟಿ, ಎಂವಿಎಸ್‌ ಯೋಜನೆ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 2278 ಸರ್ಕಾರಿ ಮತ್ತು 5551 ಖಾಸಗಿ ಬೋರ್‌ವೆಲ್‌ಗಳಿದ್ದು, ಇದರಲ್ಲಿ 776 ಖಾಸಗಿ ಬೋರ್‌ವೆಲ್‌ ಗುರುತಿಸಲಾಗಿದೆ.

ಕೊಪ್ಪಳ:

ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಮೂಲಗಳನ್ನು ಕಾಲಕಾಲಕ್ಕೆ ಪರೀಕ್ಷೆಗೊಳಪಡಿಸಿ ಶುದ್ಧತೆ ಖಚಿತಪಡಿಸಿಕೊಳ್ಳಬೇಕು. ಅಲ್ಲದೇ ಒಎಚ್‌ಟಿ, ಮಿನಿ ವಾಟರ್ ಟ್ಯಾಂಕ್, ಸಿಸ್ಟರ್ನ್ ಜಿಎಲ್‌ಎಸ್‌ಆರ್‌ ಸಂಪು ಹಾಗೂ ನೀರು ಸಂಗ್ರಾಹಕಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ, ಶುದ್ಧೀಕರಿಸಲು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶದ ಚರಂಡಿ ಪಕ್ಕದಲ್ಲಿರುವ ಪೈಪ್‌ಲೈನ್‌ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಉದ್ಭವಿಸಿದರೆ ತಹಸೀಲ್ದಾರ್‌ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಈಗಾಗಲೇ ಗ್ರಾಮ ಮತ್ತು ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್‌ ಸಮಿತಿ ರಚಿಸಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಅನುದಾನದ ಕೊರತೆ ಇರುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 153 ಗ್ರಾಮ ಪಂಚಾಯಿತಿ ಇದ್ದು 722 ಗ್ರಾಮಗಳಿವೆ. ಇದರಲ್ಲಿ 472 ಗ್ರಾಮಗಳಿಗೆ ಡಿಬಿಒಟಿ, ಎಂವಿಎಸ್‌ ಯೋಜನೆ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 2278 ಸರ್ಕಾರಿ ಮತ್ತು 5551 ಖಾಸಗಿ ಬೋರ್‌ವೆಲ್‌ಗಳಿದ್ದು, ಇದರಲ್ಲಿ 776 ಖಾಸಗಿ ಬೋರ್‌ವೆಲ್‌ ಗುರುತಿಸಲಾಗಿದೆ. 15 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಅಲ್ಲಿ 17 ಖಾಸಗಿ ಬೋರ್‌ವೆಲ್‌ಗಳ ಮಾಲೀಕರಿಂದ ಕರಾರು ಪತ್ರ ಮಾಡಿಸಿಕೊಂಡು ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯ ನಗರ ಪ್ರದೇಶದಲ್ಲಿ ಜೂನ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಮತ್ತು ನಗರ ಪ್ರದೇಶ ಸರ್‌ಫೇಸ್ ವಾಟರ್ ಮತ್ತು ಬೋರ್‌ವೆಲ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಒಟ್ಟು 860 ಬೋರ್‌ವೆಲ್‌ಗಳಿದ್ದು, ಅದರಲ್ಲಿ 749 ಬೋರ್‌ವೆಲ್‌ ಚಾಲನೆಯಲ್ಲಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ತುಂಗಭದ್ರಾ ಹಿನ್ನಿರಿನಿಂದ 0.3 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಎಂದರು.

ಎಲ್ಲಾದರೂ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಸಾರ್ವಜನಿಕರಿಗೆ ದೂರು ಸಲ್ಲಿಸಲು ತಾಲೂಕು ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಈ ವರೆಗೆ ಗ್ರಾಮೀಣದಲ್ಲಿ 18 ಮತ್ತು ನಗರ ಪ್ರದೇಶದಲ್ಲಿ 101 ದೂರು ಸ್ವೀಕೃತವಾಗಿದ್ದು, ಇವುಗಳನ್ನು ಬಗೆಹರಿಸಲಾಗಿದೆ. ಈ ದೂರುಗಳು ಪೈಪ್‌ಲೈನ್ ದುರಸ್ತಿ, ಕುಡಿಯುವ ನೀರು ಒದಗಿಸಲು ಮತ್ತು ಮೋಟರ್ ದುರಸ್ತಿಗೆ ಸಂಬಂಧಿಸಿರುತ್ತವೆ ಎಂದರು.

ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಮತ್ತು ಬುಧವಾರ ಗ್ರಾಮಮಟ್ಟದ ಕಾರ್ಯಪಡೆ ಮತ್ತು ಪ್ರತಿ ಗುರುವಾರ ತಾಲೂಕುಮಟ್ಟದ ಕಾರ್ಯಪಡೆ ಮತ್ತು ಜಿಲ್ಲಾಮಟ್ಟದಲ್ಲಿ ಪ್ರತಿ ಶುಕ್ರವಾರ ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು, ಪಶು ಸಖಿ, ಕೃಷಿ ಸಖಿ ಮತ್ತು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಾಪ್ತಾಹಿಕ ಸಭೆ ನಡೆಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ 1016004.16 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇನ್ನೂ 66 ವಾರಕ್ಕೆ ಸಾಕಾಗಲಿದೆ ಎಂದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಜಿಲ್ಲಾಧಿಕಾರಿ ಕಚೇರಿಯ ಶಿವಕುಮಾರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.