ಸಾರಾಂಶ
ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವ ಉಗ್ರರು ಕೇವಲ ಧರ್ಮ ಕೇಳಿ ರಕ್ತದೋಕುಳಿ ಹರಿಸಿರುವುದು ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಉಗ್ರರ ನಿರ್ಲಜ್ಜ, ಹೇಡಿತನದ ಪೈಶಾಚಿಕ ಕೃತ್ಯ ಸರ್ವತ್ರ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವ ಉಗ್ರರು ಕೇವಲ ಧರ್ಮ ಕೇಳಿ ರಕ್ತದೋಕುಳಿ ಹರಿಸಿರುವುದು ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಉಗ್ರರ ನಿರ್ಲಜ್ಜ, ಹೇಡಿತನದ ಪೈಶಾಚಿಕ ಕೃತ್ಯ ಸರ್ವತ್ರ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.ಪಾಕ್ ಬೆಂಬಲಿತ ಉಗ್ರರ ದಾಳಿಯಲ್ಲಿ ಮೃತರಾಗಿರುವ ಕರ್ನಾಟಕದ ಮಂಜುನಾಥ್ ರಾವ್, ಭರತ್ ಭೂಷಣ್ ಸಹಿತ 28 ಅಮಾಯಕ ಪ್ರವಾಸಿಗರ ಕಗ್ಗೊಲೆಗೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.ಈ ಬೀಭತ್ಸ್ಯ ಘಟನೆಗೆ ದೇಶಾದ್ಯoತ ಸಾರ್ವತ್ರಿಕ ಖಂಡನೆ ವ್ಯಕ್ತವಾಗಿದ್ದು ಕೇಂದ್ರ ಸರ್ಕಾರ, ಅಟ್ಟಹಾಸ ಮೆರೆದ ಉಗ್ರರನ್ನು ಬೇಟೆಯಾಡಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ. ಸಮಾಜದಲ್ಲಿ ತುಷ್ಟೀಕರಣ, ವಿಭಜಕ ನೀತಿ ತಾಂಡವವಾಡುತ್ತಿರುವ ಕಾಲಘಟ್ಟದಲ್ಲಿ ವಿಚಲಿತರಾಗಿರುವ ಹಿಂದೂ ಧರ್ಮೀಯರಿಗೆ ಇಂತಹ ಪೈಶಾಚಿಕ ಘಟನೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದವರು ಹೇಳಿದ್ದಾರೆ.ರಾಜ್ಯ ಸರ್ಕಾರ ಕೇವಲ ರಾಜಕೀಯ ಕಾರಣಕ್ಕಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡದೆ ದೇಶದ ಏಕತೆ ಮತ್ತು ದೇಶವಾಸಿಗಳ ಸುರಕ್ಷತೆಗಾಗಿ ಎಲ್ಲ ಸ್ತರಗಳಲ್ಲಿ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುವುದು ಇಂದಿನ ಅಗತ್ಯತೆಯಾಗಿದೆ. ರಾಜ್ಯ ಸರ್ಕಾರ ಭಯೋತ್ಪಾದಕ ದಾಳಿಯಲ್ಲಿ ಮೃತರಾಗಿರುವ ಈರ್ವರು ಕನ್ನಡಿಗರ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರವನ್ನು ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರವನ್ನು ಅಗ್ರಹಿಸಿದ್ದಾರೆ.