ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿರುವುದರಿಂದ ಅವಧಿಗೆ ಮುನ್ನ ಕಾಲುವೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.
ಕುರುಗೋಡು: ಬೇಸಿಗೆಯ ಬಿಸಿಲು ತಾರಕಕ್ಕೇರಿದೆ. ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ನರಸಪ್ಪ ಸೂಚಿಸಿದರು.ಇಲ್ಲಿನ ಪಟ್ಟಣದ ತಾಲೂಕು ಕಚೇರಿಯಲ್ಲಿ ಜರುಗಿದ ತಾಲೂಕು ಕಾರ್ಯಪಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿರುವುದರಿಂದ ಅವಧಿಗೆ ಮುನ್ನ ಕಾಲುವೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಗ್ರಾಮಗಳಲ್ಲಿರುವ ಕೆರೆಗಳಲ್ಲಿ ಸಂಗ್ರಹ ಇರುವ ನೀರು ಮಾರ್ಚ್ ಅಂತ್ಯದವರೆಗೆ ಸರಬರಾಜು ಮಾಡಬಹುದು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯಬಿದ್ದರೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳಿ. ನೀರು ಪರೀಕ್ಷಿಸಿ ಕುಡಿಯಲು ಯೋಗ್ಯವಿದೆ ಎಂದು ವರದಿಬಂದ ನಂತರ ಸರಬರಾಜು ಮಾಡಬೇಕು. ಇಲ್ಲವಾದರೆ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೃಷಿ ಮತ್ತು ಪಶುಸಂಗೋಪನೆ ಇಲಾಖೆಗೆ ಸೂಚಿಸಿದರು.ವಾಂತಿಭೇದಿ, ಮಲೇರಿಯಾ, ಡೆಂಘೀ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಸಮಯದಲ್ಲಿ ಅನಗತ್ಯವಾಗಿ ಜನರು ಮನೆಯಿಂದ ಹೊರಬಾರದಂತೆ ಮತ್ತು ಅನಾರೋಗ್ಯಕ್ಕೆ ತುತ್ತಾಗದಂತೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಚಾರ ನಡೆಸಬೇಕು ಎಂದು ಆರೋಗ್ಯ ಇಲಾಖೆ ಮತ್ತು ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.ನೀರು ಸರಬರಾಜಿಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ಮಾರ್ಗದಲ್ಲಿ ತೊಂದರೆ ಕಂಡುಬಂದರೆ ಕೂಡಲೇ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು. ಮಳೆಯಾದದಿದ್ದರೂ ಬಿರುಗಾಳಿ ಬೀಸುವ ಸೂಚನೆಗಳಿವೆ. ರಭಸವಾಗಿ ಬೀಸುವ ಗಾಳಿಗೆ ವಿದ್ಯುತ್ ಕಂಬ ಮತ್ತು ತಂತಿ ತುಂಡಾಗಿಬಿದ್ದು ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಅಗತ್ಯಬಿದ್ದರೆ ಕಂಬ ಮತ್ತು ತಂತಿ ಬದಲಿಸಲು ಕ್ರಮಕೈಗೊಳ್ಳಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶ ರೇಣುಕಾಚಾರ್ಯ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಜೆಸ್ಕಾಂ ಎಇಇ ರಾಜೇಂದ್ರ ಪ್ರಸಾದ್, ನೈರ್ಮಲ್ಯ ಮತ್ತು ನೀರು ಸರಬರಾಜು ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.ಕುರುಗೋಡು ಪಟ್ಟಣದ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ನರಸಪ್ಪ ತಹಶೀಲ್ದಾರ್ ಸೂಚಿಸಿದರು.