ಸಾರಾಂಶ
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ‘ದೃಷ್ಟಿ’ ಅನಾವರಣಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಸಾಹಿತ್ಯದ ಓದು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು, ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಸಂಗೀತ, ಸಾಹಿತ್ಯ, ಕಲೆಗಳಲ್ಲಿ ಆಸಕ್ತಿಯಿಲ್ಲದವನು ಬಾಲವಿಲ್ಲದ ಪಶುವಿನಂತೆ. ಬದುಕನ್ನು ಹೊಸ ಬಗೆಯಲ್ಲಿ ಕಟ್ಟಿಕೊಳ್ಳುವಲ್ಲಿ ಬರವಣಿಗೆ ಪೂರಕವಾದದ್ದು. ವಾರ್ಷಿಕ ಸಂಚಿಕೆ ಎಂಬುದು ಒಂದು ವಿದ್ಯಾಸಂಸ್ಥೆಯ ಮುಖವಾಣಿಯಿದ್ದಂತೆ. ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಒಳ್ಳೆಯ ವೇದಿಕೆ ಎಂದು ಲೇಖಕಿ, ಕವಯಿತ್ರಿ ಸಾಲಿಗ್ರಾಮ ಚಿತ್ರಪಾಡಿ ಸುಮನಾ ಆರ್. ಹೇರ್ಳೆ ಹೇಳಿದರು.ಅವರು ಇಲ್ಲಿನ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ‘ದೃಷ್ಟಿ’ ಅನಾವರಣಗೊಳಿಸಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಎಂ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಕಾರ್ಯದರ್ಶಿ ಎಚ್. ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯದ ಕಾರ್ಯದರ್ಶಿ ಎನ್. ಸದಾಶಿವ ನಾಯಕ್ ಮುಖ್ಯ ಅಭ್ಯಾಗತರಾಗಿ ಶುಭಾಶಂಸನೆಗೈದರು.ವಾರ್ಷಿಕ ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕ ಎಚ್. ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಗೌತಮಿ ನಾಯಕ್ ಸ್ವಾಗತಿಸಿದರು. ಪ್ರಜ್ವಲ್ ದೇವಾಡಿಗ ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಸುಪ್ರೀತಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.