ಬೇಬಿಬೆಟ್ಟದಲ್ಲಿ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ಗಣ್ಯರಿಂದ ಚಾಲನೆ

| Published : Mar 09 2024, 01:37 AM IST

ಬೇಬಿಬೆಟ್ಟದಲ್ಲಿ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ಗಣ್ಯರಿಂದ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ವ್ಯವಸಾಯದ ಪದ್ಧತಿ ಬದಲಾವಣೆ ಮಾಡುವುದು ದೊಡ್ಡ ಸವಾಲಾಗಿದೆ. ರೈತರಿಗೆ ಆದಾಯ ಹೆಚ್ಚಳ ಮಾಡುವ ಕೃಷಿ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಬೆಳೆ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಮಿತವಾಗಿ ನೀರು ಬಳಕೆ ಮಾಡಿಕೊಳ್ಳಬೇಕು. ವಿಸಿ ನಾಲೆ ಆಧುನೀಕರಣ ನಡೆಯುತ್ತಿರುವುದರಿಂದ ನೀರು ಬಿಡಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬೇಬಿಬೆಟ್ಟದ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ಶಿವಬಸವ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಚಾಲನೆ ನೀಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬೇಬಿಬೆಟ್ಟದ ದನಗಳ ಜಾತ್ರೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಜಾತ್ರೆಗೆ ಸುತ್ತಮುತ್ತಲಿನ ಎಲ್ಲಾ ಗ್ರಾಪಂ ಮುಖಂಡರು, ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದರು.

ಬರಗಾಲದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ವ್ಯವಸಾಯದ ಪದ್ಧತಿ ಬದಲಾವಣೆ ಮಾಡುವುದು ದೊಡ್ಡ ಸವಾಲಾಗಿದೆ. ರೈತರಿಗೆ ಆದಾಯ ಹೆಚ್ಚಳ ಮಾಡುವ ಕೃಷಿ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಬೆಳೆ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದರು.

ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಮಿತವಾಗಿ ನೀರು ಬಳಕೆ ಮಾಡಿಕೊಳ್ಳಬೇಕು. ಸಿಡಿಎಸ್ ನಾಲೆಗೆ ನೀರು ಬಿಡಲು ಕ್ರಮ ವಹಿಸಲಾಗಿದೆ. ವಿಸಿ ನಾಲೆ ಆಧುನೀಕರಣ ನಡೆಯುತ್ತಿರುವುದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದರು.

ಶ್ರೀಶಿವಬಸವ ಸ್ವಾಮೀಜಿ ಮಾತನಾಡಿ, ಬೇಬಿಬೆಟ್ಟದ ದನಗಳ ಜಾತ್ರೆಗೆ ಜಾತ್ರೆ ಆರಂಭವಾಗಿ ಎರಡು ಮೂರು ದಿನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಬರುತ್ತಿದ್ದವು. ಆದರೆ, ಈ ಬಾರಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಭಾಗವಹಿಸಿವೆ ಎಂದು ವಿಷಾದಿಸಿದರು.

ಬೇಬಿಬೆಟ್ಟಕ್ಕೆಮೂಲ ಹೆಸರು ಸಿದ್ದಗಿರಿ ಎಂಬುದಾಗಿತ್ತು. ಅನೇಕ ಜ್ಞಾನಿಗಳು ತಪ್ಪಸ್ಸು ಮಾಡಿದ್ದಾರೆ. ಬೆಟ್ಟದಲ್ಲಿ ಮಲ್ಲಿಕಾರ್ಜುನಸ್ವಾಮಿ, ಸಿದ್ದಲಿಂಗೇಶ್ವರ, ಮಹದೇಶ್ವರ ದೇವಸ್ಥಾನ ಇದೆ. ಬೇಬಿಬೆಟ್ಟ ಹಾಗೂ ಮೈಸೂರು ಅರಮನೆಗೂ ಅವಿನಾಭವ ಸಂಬಂಧವಿದೆ. ರಾಜ್ಯದಲ್ಲಿ ನಡೆಯುವ ಯಾವುದೇ ಜಾತ್ರೆಯೂ ರಾಸುಗಳಿಗೆ ಚಿನ್ನದ ಬಹುಮಾನ ನೀಡಲ್ಲ. ರಾಸುಗಳಿಗೆ ಚಿನ್ನದ ಬಹುಮಾನ ನೀಡುವ ಏಕೈಕ ಜಾತ್ರೆ ಬೇಬಿಬೆಟ್ಟದ ಜಾತ್ರೆಯಾಗಿದೆ ಎಂದು ಬಣ್ಣಿಸಿದರು.

ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ಬೇಬಿಬೆಟ್ಟದಲ್ಲಿ ಜಾತ್ರೆ ಅದ್ಧೂರಿಯಾಗಿ ನಡೆಸಿದ್ದೆವು. ಇದೀಗ ದರ್ಶನ್ ಪುಟ್ಟಣ್ಣಯ್ಯ ಅವರು ಅದಕ್ಕಿಂತ ತುಂಬಾ ಚನ್ನಾಗಿ ಆಯೋಜಿಸಿದ್ದಾರೆ. ಜಾತ್ರೆಯ ಯಶಸ್ವಿಗೆ ಎಲ್ಲಾ ಸ್ಥಳೀಯ ಮುಖಂಡರು, ಅಧಿಕಾರಿಗಳು, ಸಿಬ್ಬಂದಿ ಸಹಕಾರ ನೀಡಿ ಯಶಸ್ವಿಯಾಗಿ ನಡೆಸಬೇಕು ಎಂದು ಮನವಿ ಮಾಡಿದರು.

ವಸ್ತು ಪ್ರದರ್ಶನ:

ಜಾತ್ರಾ ಮೈದಾನದಲ್ಲಿ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ನಿರ್ಮಿಸಿದ್ದಾರೆ. ಕೃಷಿ, ಆರೋಗ್ಯ, ತೋಟಗಾರಿಕೆ, ಶಿಕ್ಷಣ, ವಿದ್ಯುತ್, ರೇಷ್ಮೆ, ಮೀನುಗಾರಿಕೆ, ಶಿಶು ಅಭಿವೃದ್ಧಿ ಯೋಜನೆ, ಅರಣ್ಯ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಮಾಹಿತಿ, ಸೌವಲತ್ತುಗಳ ಬಗ್ಗೆ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಸಮಾರಂಭದಲ್ಲಿ ಹೊನಗನಹಳ್ಳಿ ಗ್ರಾಪಂ ಅಧ್ಯಕ್ಷೆ ಪುಟ್ಟಲಿಂಗಮ್ಮ, ನಾರಾಯಣಪುರ ಗ್ರಾಪಂ ಅಧ್ಯಕ್ಷ ಆನಂದ್, ಕಟ್ಟೇರಿ ಗ್ರಾಪಂ ಅಧ್ಯಕ್ಷ ರಮೇಶ್, ರೈತಸಂಘದ ತಾಲೂಕು ಅಧ್ಯಕ್ಷ ನಾಗರಾಜು, ಕೆ.ಎಸ್.ದಯಾನಂದ, ಎಚ್.ಎಲ್.ಪ್ರಕಾಶ್, ತಹಸೀಲ್ದಾರ್ ಶ್ರೇಯಸ್, ತಾಪಂ ಇಒ ಲೋಕೇಶ್ ಮೂರ್ತಿ, ಬಿಇಒ ಬಿ.ಚಂದ್ರಶೇಖರ್, ಸರ್ಕಲ್ ಇನ್ಸ್ ಪೆಕ್ಟರ್ ಕುಮಾರ್, ಮುಖಂಡರಾದ ಕುಬೇರ್, ಪುಟ್ಟೇಗೌಡ, ಮಂಜುನಾಥ್, ಸಿ.ಆರ್.ರಮೇಶ್, ಹರೀಶ್ ಸೇರಿದಂತೆ ಹಲವರು ಹಾಜರಿದ್ದರು.