ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕಲುಷಿತ ವಾತಾವರಣ, ಏರುತ್ತಿರುವ ತಾಪಮಾನ, ಅಂತರ್ಜಲ ಕುಷಿತಕ್ಕೆ ಸಸಿಗಳನ್ನು ನೆಟ್ಟು ಪೋಷಿಸುವುದೊಂದೇ ಪರಿಹಾರ ಮಾರ್ಗವಾಗಿದ್ದು, ಇಡೀ ಹುಬ್ಬಳ್ಳಿಯನ್ನು ಹಸಿರುಮಯ ಮಾಡುವ ಚಿಂತನೆ ಇದೆ. ಇದರ ಭಾಗವಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವನ್ನು ಅಲ್ಪ ಅವಧಿಯಲ್ಲಿ ಹಸಿರುಮಯ ಮಾಡುವುದಾಗಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಭರವಸೆ ನೀಡಿದರು.ಶುಕ್ರವಾರ ವೀರ ಸಂಗೊಳ್ಳಿ ರಾಯಣ್ಣ ನಗರದ 4 ಉದ್ಯಾನವನಗಳಲ್ಲಿ ಹಾಗೂ ಬಡಾವಣೆ ರೋಡ್ ಪಕ್ಕದಲ್ಲಿ 1000 ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಕನಸಿಗೆ ಬೆನ್ನೆಲುವಾಗಿ ನಿಂತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಲ್ಲಿದ್ದಲು ಇಲಾಖೆಯ (ಕೋಲ್ ಇಂಡಿಯಾ ಲಿಮಿಟೆಡ್) ಸಿಎಸ್ಆರ್ ಚಟುವಟಿಕೆ ಅಡಿ ಧಾರವಾಡ ಜಿಲ್ಲೆಯಲ್ಲಿ ಆಯ್ದ ಸ್ಥಳಗಳಲ್ಲಿ 4000 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮದ ಭಾಗವಾಗಿ ನಮಗೆ 1000 ಸಸಿಗಳ ಪ್ಯಾಕೇಜ್ ನೀಡಿದ್ದಾರೆ ಎಂದು ವಿವರಿಸಿದರು.ಇದೇ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ನಗರದ ಒಳಚರಂಡಿ, ನಿರಂತರ ನೀರು, ರಸ್ತೆ ದುರಸ್ಥಿ ಕಾಮಗಾರಿಗಳನ್ನು ಮಾಡಿಸುವ ಜತೆಗೆ ಬಡಾವಣೆ ಹಸ್ತಾಂತರ ಪ್ರಕ್ರೀಯೆಯನ್ನು ಹುಡಾ ಮತ್ತು ಪಾಲಿಕೆ ಅಧಿಕಾರಿಗಳು ಸಮನ್ವಯತೆಯಿಂದ ನಿಭಾಯಿಸುವಂತೆ ಸ್ಥಳದಲ್ಲೇ ಸೂಚನೆ ನೀಡಿದರು.
ಎಪಿಎಂಸಿ ಹಸಿರೀಕರಣ:ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ ಅವರು, ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿ 15 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಈಗ ಅವುಗಳ ಕೆಳಗೆ ಲಾರಿಗಳು ನಿಲ್ಲುವಷ್ಟು ಬೆಳೆದು ನಿಂತಿವೆ. ಇಡೀ ಎಪಿಎಂಸಿ ಆವರಣ ಹಸಿರುಮಯ ಆಗಿದೆ. ಪಂಚವಟಿ ನಿರ್ಮಾಣದ ಪ್ರಯೋಗವೂ ಯಶಸ್ವಿಯಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ಮಳಿಗೆಯ ಬಳಿ ಒಂದು ಮಾವಿವ ಗಿಡ ನೆಡುವ ಕನಸಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರನ್ ಫಾರ್ ನೇಚರ್ ಅಭಿಯಾನದ ಸಂಚಾಲಕ ಮೇಘರಾಜ, ಇದು ಬರೀ ಸಸಿ ನೆಡುವ ಕಾರ್ಯಕ್ರಮ ಮಾತ್ರ ಅಲ್ಲ. ಹೀಗೆ ನೆಟ್ಟ ಸಸಿಗಳನ್ನು ಕನಿಷ್ಟ ಮೂರು ವರ್ಷಗಳ ಕಾಲ ಪಾಲನೆ ಮಾಡಿ, ಆಯಾ ಸ್ಥಳೀಯ ಆಡಳಿತಕ್ಕೆ ಒಪ್ಪಿಸಲಾಗುತ್ತದೆ. ಈ ಸಸಿಗಳು ಬೆಳೆದು ಗಿಡಮರಗಳಾಗಲು ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯವಾಗಿದೆ. ಇಂಥ ಸಹಕಾರ ಈ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಗಳಿಂದ ಲಭಿಸಿದೆ ಎಂದರು.ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಹುಡಾ ಆಯುಕ್ತ ಸಂತೋಷ ಬಿರಾದರ ಮಾತನಾಡಿದರು. ವೀರ ಸಂಗೊಳ್ಳಿ ರಾಯಣ್ಣ ನಗರದ ಹಿತವರ್ಧಕ ಸಂಘ ಅಧ್ಯಕ್ಷ ಯು.ಬಿ.ಪೀರಣ್ಣವರ ಬಡಾವಣೆಯಲ್ಲಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮನವಿ ಸಲ್ಲಿಸಿದರು.
ನಂ-4 ವಲಯದ ಸಹಾಯಕ ಆಯುಕ್ತ ನೂಲ್ವಿ, ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ, ವಸುಂದರ ಫೌಂಡೇಶನ್ನಿನ ಮೇಘರಾಜ ಕೆರೂರ, ವಿನಾಯಕ ನಾಯಕರ, ಓಂ ಕಿರಣ್, ತೋಟಪ್ಪ ನಿಡಗುಂದಿ, ಸಿ.ಎಸ್.ಹವಾಲ್ದಾರ, ಕೃಷ್ಣಾ ಶೆಟ್ಟಿ, ಶಿವಣ್ಣ, ಪುಂಡಲೀಕ ಆಲೂರ, ರುದ್ರಪ್ಪ ವಿರಪಣ್ಣವರ, ರಾಜು ಬಿಜಾಪುರ, ಮಲ್ಲಿಕಾಜುನ ಸಿದ್ದಣ್ಣವರ, ಹುಡೇದ, ಬೆಳಮಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.