ಕಟ್ಟಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ಚಾಲನೆ

| Published : Feb 12 2024, 01:33 AM IST / Updated: Feb 12 2024, 04:35 PM IST

ಸಾರಾಂಶ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ತಾಲೂಕಿನ ಕಟ್ಟಹಳ್ಳಿ ಮೊದಲನೇ ಹಂತದ 46 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಶಾಸಕ ಎಚ್.ಟಿ.ಮಂಜು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ತಾಲೂಕಿನ ಕಟ್ಟಹಳ್ಳಿ ಮೊದಲನೇ ಹಂತದ 46 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಶಾಸಕ ಎಚ್.ಟಿ.ಮಂಜು ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, ಹೇಮಾವತಿ ನದಿಯ ಬಳಿ ಜಾಕ್‌ವೆಲ್ ಮತ್ತು ಪಂಪ್‌ಹೌಸ್ ನಿರ್ಮಿಸಿ ಏತ ನೀರಾವರಿ ಮೂಲಕ ಮೂರು ಹಂತಗಳಲ್ಲಿ 67.76 ಕ್ಯೂಸೆಕ್ ನೀರನ್ನು ಎತ್ತಿ ಬೂಕನಕೆರೆ ಹಾಗೂ ಶೀಳನೆರೆ ಹೋಬಳಿಯ 89 ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮೊದಲನೇ ಹಂತದಲ್ಲಿ 46 ಕೆರೆ, ಎರಡನೇ ಹಂತದಲ್ಲಿ 22 ಕೆರೆ, ಮೂರನೇ ಹಂತದಲ್ಲಿ 21 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯು ಮುಗಿದಿದೆ. ಈ ಯೋಜನೆಯಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಒದಗಿಸುವ ಉದ್ದೇಶವನ್ನೂ ಹೊಂದಿದೆ ಎಂದರು.

ಒಂದು ಸರ್ಕಾರದ ಅವಧಿಯಲ್ಲಿ ಮುಗಿದಿದ್ದ ಕೆಲಸಗಳನ್ನು ಮುಂದಿನ ಸರ್ಕಾರ ಕಾರ್ಯರೂಪಕ್ಕೆ ತರುವುದು ಸಹಜ ಪ್ರಕ್ರಿಯೆ. ಕಟ್ಟಹಳ್ಳಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 30 ಕೋಟಿ ರು.ಗಳಿಗೂ ಅಧಿಕ ಹಣ ಬೇಕಿದೆ. 

ಈ ಬಗ್ಗೆ ಮುಖ್ಯಮಂತ್ರಿಯವರ ಬಳಿ ಚರ್ಚಿಸಿ ಅನುದಾನ ಒದಗಿಸಲಾಗುವುದು. ಕಾಮಗಾರಿ ಅನುಷ್ಠಾನದಲ್ಲಿ ಮಾಜಿ ಸಚಿವ ನಾರಾಯಣಗೌಡರೂ ಸಹ ಆಸಕ್ತಿ ವಹಿಸಿದ್ದಾರೆ. ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, 2ನೇ ಹಂತದ ಕಾಮಗಾರಿ ಪೂರ್ಣಗೊಳಿಸಿ ಶೀಳನೆರೆ ಹೋಬಳಿ ಕರೆ-ಕಟ್ಟೆಗಳಿಗೆ ನೀರುಣಿಸಲು 8 ರಿಂದ 10 ಕೋಟಿ ರು.ನ ಹಣದ ಅವಶ್ಯಕತೆಯಿದೆ. 

ಸಚಿವರು ಈ ಬಗ್ಗೆ ಆಸಕ್ತಿ ವಹಿಸಬೇಕು. ಸಂತೆಬಾಚಹಳ್ಳಿ ಹೋಬಳಿಯ ಒಡೆದು ಹೋದ ಕೆರೆಗಳನ್ನು ದುರಸ್ತಿಪಡಿಸಲು ಸಚಿವರು ಮನಸ್ಸು ಮಾಡಬೇಕು. ಇದಕ್ಕೆ 8 ಕೋಟಿ ರು.ಗಳ ಹಣಕಾಸಿನ ನೆರವು ಬೇಕಾಗಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಬಾಕಿಯಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಹೊಸಹೊಳಲು ಮೇಲ್ಸೇತುವೆ ಕಾಮಗಾರಿಗೆ 18 ಕೋಟಿ ರು.ಗಳ ಅನುದಾನದ ಫೈಲ್ ಸರ್ಕಾರದ ಮಟ್ಟದಲ್ಲಿದೆ. ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಐಚನಹಳ್ಳಿ ಸಮೀಪವೇ ಕೋಟ್ಯಾಂತರ ರು.ಗಳ ವೆಚ್ಚದಲ್ಲಿ ಈ ಕಾಮಗಾರಿ ನೆರವೇರಿದ್ದರೂ ಐಚನಹಳ್ಳಿ ಕೆರೆಗೆ ಮಾತ್ರ ನೀರು ಪೂರೈಕೆಯಾಗುತ್ತಿಲ್ಲ. 

ಕೂಡಲೇ ನಮ್ಮ ಗ್ರಾಮದ ಕೆರೆಗೆ ನೀರು ತುಂಬಿಸಿಕೊಡಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರ ಪರವಾಗಿ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಸಚಿವ ಚಲುವರಾಯಸ್ವಾಮಿ ಅವರಿಗೆ ಮನವಿ ಮಾಡಿದರು.

ಗಂಜಿಗೆರೆ ಗ್ರಾಪಂ ಅಧ್ಯಕ್ಷ ಪರಮೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರ ಕುಮಾರ್, ಕಿಕ್ಕೇರಿ ಸುರೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ ಎಲ್ ದೇವರಾಜು, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಶೀಳನೆರೆ ಮೋಹನ್.

ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್, ಡಿ.ಪ್ರೇಂಕುಮಾರ್, ತಾಪಂ ಮಾಜಿ ಸದಸ್ಯ ಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್, ಇಇ ಶಂಕರ್.

ಇಇ ವಿನಾಯಕ ಹರೆಅಟ್ಟಿ, ಎಇ.ನಿರ್ಮಲೇಶ್, ಜೆಇ ಅಜರುದ್ದೀನ್, ಜವರಾಯಿಗೌಡ, ವಕೀಲರ ಸಂಘದ ಅಧ್ಯಕ್ಷ ರವಿಶಂಕರ್, ಶಿವಣ್ಣ, ರಾಜಯ್ಯ, ಶಿವಣ್ಣ, ರಾಯಪ್ಪ, ಶಾಸಕರ ಆಪ್ತ ಸಹಾಯಕ ಪ್ರತಾಪ್, ಚೇತನಾಮಹೇಶ್ ಸೇರಿದಂತೆ ಹಲವರಿದ್ದರು.