ಸಾರಾಂಶ
ಧಾರವಾಡ:
ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ತಾಲೂಕಿನ ಗರಗ ಗ್ರಾಮದ ಮಡಿವಾಳೇಶ್ವರ ಮಠದಿಂದ ಶ್ರೀಕ್ಷೇತ್ರ ಉಳವಿಗೆ 8ನೇ ವರ್ಷದ ಪಾದಯಾತ್ರೆಗೆ ಗುರುವಾರ ವಿವಿಧ ಮಠಾಧೀಶರು ಚಾಲನೆ ನೀಡಿದರು.ಮಡಿವಾಳೇಶ್ವರ ಮಠದಲ್ಲಿ ವಿವಿಧ ಮಠಾಧೀಶರ ಪಾದಪೂಜೆ ಮಾಡಿದ ಅಮೃತ ದೇಸಾಯಿ ಹಾಗೂ ಅವರ ಪತ್ನಿ, ಅಲ್ಲಿಂದ ಉಳವಿಯತ್ತ ಪಾದಯಾತ್ರೆ ಆರಂಭಿಸಿದರು. ಗರಗ ಶ್ರೀಮಠದ ಚೆನ್ನಬಸವ ಸ್ವಾಮೀಜಿ ಅವರು ಉಳವಿ ಪಾದಯಾತ್ರೆ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ, ಅವರಿಗೆ ವಯಸ್ಸಾದ ಕಾರಣ ಆ ಜವಾಬ್ದಾರಿಯನ್ನು ಮಾಜಿ ಶಾಸಕ ಅಮೃತ ದೇಸಾಯಿ ಅವರೇ ವಹಿಸಿಕೊಂಡು ಸ್ವಾಮೀಜಿಗಳ ಪರವಾಗಿ ಅಂದಿನಿಂದ ಉಳವಿಗೆ ತಾವೇ ಪಾದಯಾತ್ರೆ ಮಾಡಲಾರಂಭಿಸಿದ್ದಾರೆ. ಗುರುವಾರ 8ನೇ ವರ್ಷ ಪಾದಯಾತ್ರೆಗೆ ಚಾಲನೆ ಸಿಕ್ಕಿದ್ದು, ಮೊದಲ ದಿನ ನಿಗದಿ ಗ್ರಾಮದಲ್ಲಿ ಪಾದಯಾತ್ರೆ ವಸತಿಯಾಗಲಿದೆ.ಭಾನುವಾರ ಪಾದಯಾತ್ರೆ ಶ್ರೀಕ್ಷೇತ್ರ ಉಳವಿ ತಲುಪಲಿದ್ದು, ಅಲ್ಲಿ ವಿವಿಧ ಪುಜಾ ಕಾರ್ಯಕ್ರಮ ನಡೆಯಲಿವೆ. ಅಮೃತ ದೇಸಾಯಿ ಅವರ ಈ ಉಳವಿ ಪಾದಯಾತ್ರೆಗೆ ಸಾವಿರಾರು ಜನ ಬೆಂಬಲ ಸೂಚಿಸಿದ್ದಾರೆ. ಟ್ರ‍್ಯಾಕ್ಟರ್ ಹಾಗೂ ಇತರ ವಾಹನಗಳ ಮೂಲಕ ಉಳವಿಯತ್ತ ಹೊರಟಿದ್ದಾರೆ. ಪಾದಯಾತ್ರಿಗಳಿಗೆ ಅಲ್ಲಲ್ಲಿ ಕೆಲ ಗ್ರಾಮಸ್ಥರು ಅಂಬಲಿ ನೀಡುವ ಕೆಲಸ ಕೂಡ ಮಾಡಿದರು. ಇನ್ನೂ ಕೆಲ ಗ್ರಾಮಗಳಲ್ಲಿ ಮಾಜಿ ಶಾಸಕರ ಮೇಲೆ ಗ್ರಾಮಸ್ಥರು ಪುಷ್ಪಗಳನ್ನು ಹಾಕಿ ಬೆಂಬಲ ಸೂಚಿಸಿದರು.
ದೇವರ ಶೀಗಿಹಳ್ಳಿಯ ವೀರೇಶ ದೇವರು, ಮಡಿವಾಳೇಶ್ವರ ಮಠ ನಿಚ್ಚಣಕಿಯ ಪಂಚಚಾರ್ಯ ಶಿವಯೋಗಿಗಳು, ನಾಗನೂರಿನ ಬಸವಲಿಂಗ ಸ್ವಾಮೀಜಿ ಈ ಪಾದಯಾತ್ರೆಗೆ ಸಾಕ್ಷಿಯಾದರು.