ಚಾಲಕನಿಗೆ ಚಾಕುವಿನಿಂದ ಇರಿದುಕಾರು ಸಹಿತ ಪರಾರಿಯಾದವ ಸೆರೆ

| Published : Nov 16 2025, 02:00 AM IST

ಚಾಲಕನಿಗೆ ಚಾಕುವಿನಿಂದ ಇರಿದುಕಾರು ಸಹಿತ ಪರಾರಿಯಾದವ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನಿಂದ ಬಾಡಿಗೆ ನೆಪದಲ್ಲಿ ಕರೆತಂದು ಚಾಲಕನಿಗೆ ಚಾಕುವಿನಿಂದ ಇರಿದು ಕಾರಿನ ಸಮೇತ ಪರಾರಿಯಾಗಿದ್ದ ಕಿಡಿಗೇಡಿಯೊಬ್ಬನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೈಸೂರಿನಿಂದ ಬಾಡಿಗೆ ನೆಪದಲ್ಲಿ ಕರೆತಂದು ಚಾಲಕನಿಗೆ ಚಾಕುವಿನಿಂದ ಇರಿದು ಕಾರಿನ ಸಮೇತ ಪರಾರಿಯಾಗಿದ್ದ ಕಿಡಿಗೇಡಿಯೊಬ್ಬನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರದ ಮನ್ಸೂರ್‌ ಅಲಿಯಾಸ್‌ ದೂಂದ್‌ ಬಂಧಿತನಾಗಿದ್ದು, ಆರೋಪಿಯಿಂದ ಕಾರು ಜಪ್ತಿ ಮಾಡಲಾಗಿದೆ. ಎರಡು ದಿನಗಳ ಹಿಂದೆ ಟೆಲಿಕಾಂ ಲೇಔಟ್‌ನ ಕಾರು ಚಾಲಕ ಪ್ರದೀಪ್‌ಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನ್ಸೂರ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ನ.10 ರಂದು ಸುಲಿಗೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಮನ್ಸೂರ್‌, ಮತ್ತೆ ಮೂರೇ ದಿನದಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು ಕದ್ದು ಈಗ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ.13ರಂದು ಮೈಸೂರಿನ ಸಬ್‌ಅರ್ಬನ್‌ ನಿಲ್ದಾಣದಲ್ಲಿದ್ದ ಬಾಡಿಗೆ ಕಾರು ಚಾಲಕ ಪ್ರದೀಪ್‌ ಬಳಿ ತೆರಳಿದ್ದ ಮನ್ಸೂರ್‌, ಶಿವಾಜಿನಗರಕ್ಕೆ ಮೈಸೂರಿನಿಂದ ಬಾಡಿಗೆಗೆ ಮೂರು ಸಾವಿರ ರು ಕೊಡಲು ಒಪ್ಪಿದ್ದ. ಆದರೆ ನಿಗದಿತ ಸ್ಥಳದ ತಲುಪಿದ ಬಳಿಕ ಹೆಗಡೆ ನಗರಕ್ಕೆ ಬಿಡುವಂತೆ ಮನ್ಸೂರ್ ಕರೆದೊಯ್ದಿದ್ದ. ಅಲ್ಲಿ ಪ್ರದೀಪ್‌ಗೆ ಚಾಕುವಿನಿಂದ ಹಲ್ಲೆ ನಡೆಸಿ ಮೂರು ಸಾವಿರ ನಗದು ಕಸಿದು ಕೊಂಡಿದ್ದಲ್ಲದೆ ಕಾರು ಸಮೇತ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಸಾಗಾಣಿಕೆ? ಅಕ್ರಮವಾಗಿ ಮೈಸೂರಿನಿಂದ ಕಾರಿನಲ್ಲಿ ಮನ್ಸೂರ್ ಗಾಂಜಾ ಸಾಗಿಸಿದ್ದ ಎನ್ನಲಾಗಿದೆ. ಈ ವಿಚಾರ ಚಾಲಕನಿಗೆ ಗೊತ್ತಿರಲಿಲ್ಲ. ಈ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.