ಕೊಪ್ಪ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲೂ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿ ಮರಕ್ಕೆ ಗುದ್ದಿಸಿ ವಿದ್ಯಾರ್ಥಿಗಳ ಪ್ರಾಣ ಉಳಿಸಿ ತಾವೂ ಕೊನೆಯುಸಿರೆಳೆದ ದಾರುಣ ಘಟನೆ ತಾಲೂಕಿನ ಅಮ್ಮಡಿ ಬಳಿ ಶುಕ್ರವಾರ ಸಂಜೆ ನಡೆದಿದೆ.

- ಕೊಪ್ಪದ ಅಮ್ಮಡಿ ಬಳಿ ದುರಂತ । ಚಾಲಕನ ಸಾವು। ಮಕ್ಕಳು ಪ್ರಾಣಾಪಾಯದಿಂದ ಪಾರು

​ಕೊಪ್ಪ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲೂ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿ ಮರಕ್ಕೆ ಗುದ್ದಿಸಿ ವಿದ್ಯಾರ್ಥಿಗಳ ಪ್ರಾಣ ಉಳಿಸಿ ತಾವೂ ಕೊನೆಯುಸಿರೆಳೆದ ದಾರುಣ ಘಟನೆ ತಾಲೂಕಿನ ಅಮ್ಮಡಿ ಬಳಿ ಶುಕ್ರವಾರ ಸಂಜೆ ನಡೆದಿದೆ.

ಕೊಳಾವರ ಮೂಲದ ಲಕ್ಷ್ಮಣ (65) ಮೃತ ದುರ್ದೈವಿ.

​ಸಂತ ನಾರ್ಬರ್ಟ್ ಶಾಲೆಗೆ ಸೇರಿದ ಬಸ್ ಚಾಲಕ ಶುಕ್ರವಾರ ಸಂಜೆ ಶಾಲೆ ಬಿಟ್ಟ ಬಳಿಕ ಶಾಲೆಯಿಂದ ಬಸವಾನಿ ಮಾರ್ಗಕ್ಕೆ ಮಕ್ಕಳನ್ನು ಕರೆ ದೊಯ್ಯುತ್ತಿದ್ದ ವೇಳೆ ಲಕ್ಷ್ಮಣ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಅವರು ಓಡಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿದೆ. ಅಸ್ವಸ್ಥಗೊಂಡಿದ್ದ ಅವರು ಎದೆಗುಂದೆ ಬಸ್ ರಸ್ತೆಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯು ವುದನ್ನು ತಪ್ಪಿಸಿ ಮರದತ್ತ ತಿರುಗಿಸಿದ್ದಾರೆ. ಮರಕ್ಕೆ ಗುದ್ದಿದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದುರಂತದಲ್ಲೂ ಸಮಯಪ್ರಜ್ಞೆಯಿಂದ ಚಾಲಕ ಬಸ್‌ನಲ್ಲಿದ್ದ 26 ವಿದ್ಯಾರ್ಥಿಗಳ ಪ್ರಾಣ ಉಳಿಸಿದರೂ ತಾವು ಇಹಲೋಕ ತ್ಯಜಿಸಿದ್ದಾರೆ.

​ಮಕ್ಕಳು ಸುರಕ್ಷಿತ: ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ಹಾಗೂ ಬಸ್ ನಿರ್ವಾಹಕಿ (ಕಂಡಕ್ಟರ್) ಸ್ಮಿತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

​ರಕ್ಷಣಾ ಕಾರ್ಯಾಚರಣೆ ಮತ್ತು ಶಾಸಕರ ಭೇಟಿ: ಅಪಘಾತದ ತೀವ್ರತೆಗೆ ಚಾಲಕನ ಕಾಲು ಬಸ್‌ನ ಮುಂಭಾಗದಲ್ಲಿ ಸಿಲುಕಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟು ಮೃತದೇಹವನ್ನು ಹೊರತೆಗೆದರು. ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಟಿ.ಡಿ. ರಾಜೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.ಶಾಲಾ ಮಕ್ಕಳನ್ನು ಅವರವರ ಮನೆಗಳಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಲಾಯಿತು.