ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಟೆಂಪೋ ಟ್ರಾವೆಲರ್‌ನಲ್ಲಿ ಹಿಂದಿನ ಸೀಟಿನಲ್ಲಿ ಕೂತಿದ್ದ ಪ್ರಯಾಣಿಕನ ಚಪ್ಪಲಿ ಜಾರಿ ಮುಂದಿನ ಸೀಟಿನ ಬಳಿ ಬಂದಿದ್ದು, ಇದು ಎಲ್ಲಿ ಬ್ರೇಕ್‌ ಮತ್ತು ಎಕ್ಸಲೇಟರ್‌ನಲ್ಲಿ ಸಿಕ್ಕಿಕೊಳ್ಳುತ್ತೆ ಎಂದು ಚಾಲಕ ಅದನ್ನು ತೆಗೆಯಲು ಪ್ರಯತ್ನಿಸಿದಾಗ ಗೇರ್‌ ನ್ಯುಟ್ರಲ್‌ ಆಗಿ ವಾಹನ ವೇಗವಾಗಿ ಚಲಿಸಿ ಕಂದಕಕ್ಕೆ ಇಳಿದು ನಿಂತ ಘಟನೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ನಡೆದಿದೆ.

ಅದೃಷ್ಟವಶಾತ್‌ ವಾಹನದಲ್ಲಿದ್ದ ಎಲ್ಲ 13 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಮುಳ್ಳಯ್ಯನಗಿರಿ ಪ್ರವಾಸ ಮುಗಿಸಿ ವಾಪಸ್ ಇಳಿಜಾರಿನಲ್ಲಿ ಬರುತ್ತಿದ್ದಾಗ ಸೀತಾಳಯ್ಯನಗಿರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಾಣಿಕ್ಯಾಧಾರ ಮತ್ತು ಸೀತಾಳಯ್ಯನಗಿರಿ ನಡುವಿನ ಕಡಿದಾದ ಇಳಿಜಾರಿನಲ್ಲಿ ವಾಹನ ಚಲಿಸುತ್ತಿದ್ದಾಗ, ಹಿಂಭಾಗದ ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರ ಚಪ್ಪಲಿ ಜಾರಿ ಮುಂಭಾಗದ ಚಾಲಕನ ಸೀಟಿನ ಬಳಿ ಬಂದು ಬಿದ್ದಿದೆ. ಇಳಿ ಜಾರಿನ ರಸ್ತೆಯಾದ್ದರಿಂದ ಈ ಚಪ್ಪಲಿ ಎಲ್ಲಿ ಬ್ರೇಕ್ ಮತ್ತು ಎಕ್ಸಲೇಟ‌ರ್ ಪೆಡಲ್‌ಗಳ ಮಧ್ಯೆ ಸಿಲುಕಿಕೊಳ್ಳುತ್ತದೆಯೋ ಎಂಬ ಆತಂಕದಲ್ಲಿ ಚಾಲಕ ಚಲಿಸುತ್ತಿದ್ದ ವಾಹನದಲ್ಲೇ ಬಾಗಿ ಆ ಚಪ್ಪಲಿ ತೆಗೆಯಲು ಪ್ರಯತ್ನಿಸಿದ್ದಾನೆ. ಆಗ ವಾಹನದ ಗೇ‌ರ್ ಲಿವರ್ ನ್ಯೂಟ್ರಲ್ ಸ್ಥಿತಿಗೆ ಬಿದ್ದಿದೆ. ಇಳಿಜಾರಿನ ರಸ್ತೆಯಾದ್ದರಿಂದ ವೇಗವಾಗಿ ಮುಂದಕ್ಕೆ ನುಗ್ಗಿದೆ. ಬ್ರೇಕ್‌ ಹಾಕುವಷ್ಟರಲ್ಲೇ ವಾಹನ ರಸ್ತೆ ಬದಿಯ ಕಂದಕಕ್ಕೆ ಇಳಿಯತ್ತಿದ್ದಂತೆ ಪ್ರಯಾಣಿಕರು ಜೋರಾಗಿ ಕಿರುಚಾಡಿದ್ದಾರೆ. ಅದೃಷ್ಟವಶಾತ್ ಟೆಂಪೋ ಆರಂಭದಲ್ಲೇ ಸಿಲುಕಿ ನಿಂತಿದ್ದರಿಂದ ಭೀಕರ ದುರಂತ ತಪ್ಪಿ ಎಲ್ಲ 13 ಪ್ರಯಾಣಿಕರು ಪಾರಾಗಿದ್ದಾರೆ.