ದಾಖಲಾತಿ ಸರಿಪಡಿಸಿಕೊಳ್ಳಲು ಚಾಲಕರಿಗೆ ಹದಿನೈದು ದಿನಗಳ ಗಡುವು

| Published : Jul 07 2025, 11:48 PM IST

ದಾಖಲಾತಿ ಸರಿಪಡಿಸಿಕೊಳ್ಳಲು ಚಾಲಕರಿಗೆ ಹದಿನೈದು ದಿನಗಳ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ದಿನವೇ ಸಭೆ ನಡೆಸಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಠಾಣಾಧಿಕಾರಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಭೆ ನಡೆಸಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಮಂಜುನಾಥ್ ಮಾಡಿದ್ದಾರೆ. ಅಲ್ಲದೆ ವಾಹನ ಚಾಲಕರಿಗೆ ಹದಿನೈದು ದಿನಗಳ ಡೆಡ್‌ಲೈನ್ ನೀಡಿದ್ದಾರೆ.

ಸಿದ್ದಾಪುರ ಚರ್ಚ್ ಹಾಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು,

ಆಟೋರಿಕ್ಷಾ ಚಾಲಕರಿಗೆ ಚಾಲನಾ ಪರವಾನಗಿ ಇಲ್ಲ. ಇನ್ಶುರೆನ್ಸ್, ವಾಯು ಮಾಲಿನ್ಯ ನಿರಾಪೇಕ್ಷಣ ಪತ್ರವೂ ಇರಲ್ಲ. ಸಮವಸ್ತ್ರವೂ ಧರಿಸಲ್ಲ ಟೌನ್ ಮಧ್ಯೆ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುತ್ತಾರೆ. ಇದರಿಂದ ಟ್ರಾಪಿಕ್ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಮುಂದಿನ ದಿನಗಳಲ್ಲಿ ಆಟೋ ಚಾಲಕರು ತಮ್ಮ ನಿಲ್ದಾಣಗಳಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕು ಹೊರತು. ಟೌನ್ ಮಧ್ಯೆ ಅಡ್ಡಾದಿಡ್ಡಿ ಓಡಾಡುವುದು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು, ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಆದುದ್ದರಿಂದ ಟೌನ್ ನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಕಷ್ಟ ಸಾಧ್ಯವಾಗಿದೆ ಎಲ್ಲರೂ ಇಲಾಖೆಯೊಂದಿಗೆ ಸಹಕರಿಸಿ ಎಂದರು.

ವಾಹನದ ಎಲ್ಲಾ ದಾಖಲಾತಿ ಸರಿ ಇದ್ದರೆ ಅಪಘಾತ ಸೇರಿದಂತೆ ಯಾವ ಸಮಸ್ಯೆ ಎದುರಾಗದು. ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಬೇಕು ಇದನ್ನು ನಿರ್ಲಕ್ಷಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸುವುದು ಗ್ಯಾರಂಟಿ. ಪ್ರತಿಯೊಬ್ಬ ಆಟೋ ಚಾಲಕರು ಸಹಕರಿಸಬೇಕು. ನಾವು ಕೊಟ್ಟ ಡೆಡ್‌ಲೈನ್ ಮೀರಿದ ಬಳಿಕ ಕಾರ್ಯಾಚರಣೆ ನಡೆಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಖಡಕ್ ವಾರ್ನಿಂಗ್ ಮಾಡಿದರು.ವೈಟ್ ಬೋರ್ಡ್‌ ಟ್ಯಾಕ್ಸಿ ಚಾಲಕರ ವಿರುದ್ಧ ಕ್ರಮಕ್ಕೆ ಆಗ್ರಹ:

ಬಿಳಿಬಣ್ಣದ ಬೋರ್ಡ್ ಹೊಂದಿರುವ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಲಾಗುತ್ತಿದ್ದು, ಇದರಿಂದಾಗಿ ಟ್ಯಾಕ್ಸ್ ಕಟ್ಟಿ ಹಳದಿ ಬಣ್ಣದ ಬೋರ್ಡ್ ಹೊಂದಿರುವ ತಮ್ಮ ವಾಹನಗಳಿಗೆ ಬಾಡಿಗೆ ದೊರಕದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿರುವ ಆಟೋ ಚಾಲಕರು ಬಿಳಿ ಬೋರ್ಡ್ ಹೊಂದಿರುವ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಮಂಜುನಾಥ್ ಯಾವುದೇ ಕಾರಣಕ್ಕೂ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನ ಟ್ಯಾಕ್ಸಿ ನಿಲ್ದಾಣದಲ್ಲಿ ನಿಲುಗಡೆ ಮಾಡುವುದಾಗಲಿ, ಬಾಡಿಗೆಗಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಕ್ಕೆ ಅವಕಾಶವಿರುವುದಿಲ್ಲ. ಇದನ್ನು ಉಲ್ಲಂಘಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಿ ಕೊಂಡು, ವಾಹನವನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಸಭೆಯಲ್ಲಿ ಮಾತನಾಡಿದ ಸಿದ್ದಾಪುರದ ಸಾಮಾಜಿಕ ಕಾರ್ಯಕರ್ತ ಸಮ್ಮದ್, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಹಲವು ವಾಹನ ಬ್ರೋಕರ್ ಗಳು ಮಾರಾಟಕ್ಕಿರುವ ವಾಹನಗಳನ್ನು ತಂದು ನಿಲ್ಲಿಸಿ. ನೆರೆ ಜಿಲ್ಲೆಗಳಿಗೆ ವ್ಯಾಪಾರಕ್ಕೆ ತೆರಳುತ್ತಾರೆ. ಇದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳ ವಾಹನಗಳ ನಿಲುಗಡೆಗೆ ಸ್ಥಳವಿಲ್ಲದೆ ಪರದಾಡುವಂತಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅಂತಹ ಪ್ರಸಂಗ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಠಾಣಾಧಿಕಾರಿ, ಈ ಕುರಿತು ಇಲಾಖೆಗೆ ಅಥವಾ ನನ್ನ ಮೊಬೈಲ್ ನಂಬರಿಗೆ ಪೋಟೋ ಸಹಿತ ಮಾಹಿತಿ ನೀಡಿ ಸಹಕರಿಸಿ ಮಾಹಿತಿ ಗುಪ್ತವಾಗಿ ಇಡಲಾಗುವುದು ಎಂದರು.

ಸಭೆಯಲ್ಲಿ ಪಿಎಸ್ಐ ಶಿವಣ್ಣ, ಪೇದೆಗಳಾದ ಅಜಿತ್, ಕಿರಣ್, ಈರಪ್ಪ, ಪ್ರಸನ್ನ, ಆಟೋ ಚಾಲಕರ ಸಂಘದ ಪ್ರಮುಖರು ಸೇರಿದಂತೆ ಸಿದ್ದಾಪುರ ಸುತ್ತಮುತ್ತಲ ಆಟೋ ಚಾಲಕರು ಹಾಜರಿದ್ದರು.