ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರ ಸರ್ಕಾರ ಅಪಘಾತಕ್ಕೆ ಸಂಬಂಧಿಸಿದಂತೆ ಹಿಟ್ ಆ್ಯಂಡ್ ರನ್ ಕಾನೂನನ್ನು ತಿದ್ದುಪಡಿ ಮಾಡಿ ಅನುಷ್ಠಾನಗೊಳಿಸಲು ಹೊರಟಿರುವುದನ್ನು ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಚಾಲಕರ ಯೂನಿಯನ್ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ನೂರಾರು ಚಾಲಕರು ಧರಣಿಗೆ ಬೆಂಬಲಿಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಎಂ.ಎಂ.ಖಲಾಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಹಿಟ್ ಆ್ಯಂಡ್ ರನ್ ಕಾನೂನಿನಲ್ಲಿ ಕೆಲವು ಬದಲಾವಣೆ ತರಲು ಬಯಸುತ್ತಿದೆ. ಆದರೆ, ಕೆಲವೊಂದು ಅವೈಜ್ಞಾನಿಕವಾಗಿ ಅಳವಡಿಸುವ ಮೂಲಕ ಚಾಲಕ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಅವೈಜ್ಞಾನಿಕವಾದ ಕಾನೂನು ಜಾರಿಗೆ ತರಲು ಹೊರಟಿದೆ. ಸಂಸತ್ತಿನಲ್ಲಿ ಒಪ್ಪಿಗೆ ಪಡೆದು, ರಾಷ್ಟ್ರಪತಿಯವರ ಅಂಕಿತಕ್ಕೆ ಕಳಿಸಲಾಗಿದೆ. ಚಾಲಕನಿಂದ ಅಪಘಾತ ಸಂಭವಿಸಿದರೇ ಗಾಯಗೊಂಡ ವ್ಯಕ್ತಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗುವಂತಿಲ್ಲ. ಖುದ್ದು ಸ್ಥಳದಲ್ಲಿದ್ದು ಆಸ್ಪತ್ರೆಗೆ ಸಾಗಿಸಬೇಕು. ಮಹಜರು ಮಾಡುವಾಗ ಚಾಲಕ ಸ್ಥಳದಲ್ಲಿರಬೇಕು. ಇಲ್ಲವಾದಲ್ಲಿ ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ, ₹10 ಲಕ್ಷ ದಂಡ ಹಾಕಲಾಗುತ್ತದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಚಾಲಕನಿದ್ದರೆ ಗಾಯಗೊಂಡ ವ್ಯಕ್ತಿಯ ಸಂಬಂಧಿಕರು, ಸಾರ್ವಜನಿಕರು ದಾಳಿ ನಡೆಸಬಹುದು. ಈ ರೀತಿಯ ಘಟನೆಗಳಲ್ಲಿ ಎಷ್ಟೋ ಚಾಲಕರು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಕನ್ನಡಪರ ಹೋರಾಟಗಾರ ಶೇಷರಾವ ಮಾನೆ ಮಾತನಾಡಿ, ಚಾಲಕರು ರಾಷ್ಟ್ರದ ಹಾಗೂ ಸಮಾಜದ ಏಳ್ಗೆಗಾಗಿ ಅವಿರತ ಶ್ರಮಪಟ್ಟು ರಾಷ್ಟ್ರದ ವಾಣಿಜ್ಯ ಸೇವೆಯನ್ನು ಸಲ್ಲಿಸುತ್ತಿರುವ ಅವರ ಮೇಲೆ ಇಂತಹ ಕರಾಳ ಸುಗ್ರಿವಾಜ್ಞೆ ಸಮಂಜಸವಲ್ಲ ಅಪಘಾತ ಸಂಭವಿಸುವುದು ಸಾಂದರ್ಭಿಕ ಘಟನೆ ಇದಕ್ಕೆ ಚಾಲಕರೆ ಹೊಣೆ ಎಂದು ಅವರ ಮೇಲೆ ಹೊಣೆ ಹೊರೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಕೇಂದ್ರ ಸರ್ಕಾರ ತರಲಿರುವ ಹೊಸ ಕಾಯ್ದೆ ಚಾಲಕರಿಗೆ ವಿರುದ್ಧವಾದುದು. ಕೊಲೆಗಡುಕರಿಗೆ ವಿಧಿಸುವಂತಹ ಕಾನೂನು ಚಾಲಕರಿಗೆ ವಿಧಿಸಲು ಹೊರಟಿದೆ. ಇದರ ವಿರುದ್ಧ ಈಗಾಗಲೇ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಸಾವಿರಾರು ಚಾಲಕರು ಕೆಲಸ ಬಿಟ್ಟು ಮನೆಯಲ್ಲಿ ಕೂತಿದ್ದಾರೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಬಾರದು. ಚಾಲಕರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಎಸ್.ಜಿ.ಕದಮ, ಗೌರವಾದ್ಯಕ್ಷ ಅಬ್ದುಲರಜಾಕ್ ಪಟೇಲ, ಉಪಾಧ್ಯಕ್ಷ ಎಸ್.ಬಿ.ಪಟೇಲ, ಕಾರ್ಯದರ್ಶಿ ಶಂಕರ ಸೂರ್ಯವಂಶಿ, ರಾಮನಗೌಡ ಸಿದ್ದಾಪುರ, ಅಕ್ಬರ್ ಕುಡಗಿ, ಪಿರೋಜಖಾನ್ ಮುಲ್ಲಾ, ಅಬ್ದುಲಸಾಬ್ ಮುಲ್ಲಾ, ಅಬ್ದುಲ ಕೂಡಗಿ ಮಲ್ಲಿಕಾರ್ಜುನ ಕಂಬಾರ, ಸಿದ್ದಲಿಂಗಪ್ಪ ಅವಜಿ, ಆನಂದ ಗೌಳಿ, ಅಬ್ದುಲಕರೀಮ ಮುಲ್ಲಾ, ಸಾದಿಕ ಸಿದ್ದಕಿ, ಸಿದ್ದು ಆಸಂಗಿ, ಚಾಂದಬಾಷಾ ನದಾಫ ಮುಂತಾದವರು ಇದ್ದರು.