ಸಾರಾಂಶ
ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಸಾಂಪ್ರಾದಾಯಿಕ ಉತ್ಸವದ ಮಹತ್ವವನ್ನು ತಿಳಿಸುವುದರ ಮುಖಾಂತರ ವಿದ್ಯಾಭ್ಯಾಸದ ಜೊತೆಗೆ ಸಂಸ್ಕೃತಿ ಯ ಅರಿವು ವಿದ್ಯಾರ್ಥಿಗಳ ಬದುಕಿಗೆ ತುಂಬಾ ಸಹಕಾರಿಯಾಗುತ್ತದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆಧುನಿಕ ಯುಗಕ್ಕೆ ಮಾರುಹೋಗುತ್ತಿರುವ ವಿದ್ಯಾರ್ಥಿಗಳಿಗೆ ಐತಿಹಾಸಿಕ ವಿಚಾರಗಳನ್ನು ತಿಳಿ ಹೇಳುವ ಅಗತ್ಯ ಇದೆ. ಪಠ್ಯದಲ್ಲಿ ಸಾಮಾಜಿಕವಾದ ಎಲ್ಲಾ ವಿಚಾರಗಳನ್ನು ಏಕಕಾಲದಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಕಲೆಗಳ ಮುಖೇನಾ ತಿಳಿಸಲು ಸಾಧ್ಯವಿದೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ ಅಭಿಪ್ರಾಯಪಟ್ಟರು.ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತರ ತರಗತಿ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ದಿನಾಚರಣೆ 2024 ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.ದೇಶೀಯ ಕಲೆ ಪ್ರದರ್ಶನ
ಪ್ರಸ್ತುತ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಏಕ ರೂಪ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವ ಕಾರಣ ಗುಣಮಟ್ಟದ ಶಿಕ್ಷಣ ಸಮನಾಗಿ ಮಕ್ಕಳಿಗೆ ದೊರೆಯುತ್ತಿದೆ. ಇದರ ಜತೆಯಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತಿರುವುದು ಮಕ್ಕಳನ್ನು ಉತ್ತೇಜಿಸಿದಂತಾಗುತ್ತದೆ. ದೇಶೀಯ ಪರಂಪರೆಯನ್ನು ಬಿಂಬಿಸುವ ಕಲೆಗಳು ವಿದ್ಯಾರ್ಥಿಗಳಿಂದ ಮೂಡಿಬರಲು ಶಿಕ್ಷಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಸಾಂಪ್ರಾದಾಯಿಕ ಉತ್ಸವದ ಮಹತ್ವವನ್ನು ತಿಳಿಸುವುದರ ಮುಖಾಂತರ ವಿದ್ಯಾಭ್ಯಾಸದ ಜೊತೆಗೆ ಸಂಸ್ಕೃತಿ ಯ ಅರಿವು ವಿದ್ಯಾರ್ಥಿಗಳ ಬದುಕಿಗೆ ತುಂಬಾ ಸಹಕಾರಿಯಾಗುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಹೊರ ದಾರಿಯನ್ನು ತೋರಿಸುತ್ತದೆ. ಶಿಸ್ತು, ಗುರು ಹಿರಿಯರಿಗೆ ಗೌರವ ನೀಡುವ ಮೂಲಕ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದರು. ಹೊಸ ಪರಿಕಲ್ಪನೆಯ ಸ್ಪರ್ಧೆಕಾರ್ಯಕ್ರಮದ ಅಂಗವಾಗಿ ಸುಮಾರು 33 ಕ್ಕೂ ಹೆಚ್ಚು ಅಂತರ ತರಗತಿ ಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಜೊತೆಗೆ ಪೆಟ್ ಎಕ್ಸಿಬಿಷನ್ ಸ್ಟ್ಯಾಂಡ್ ಆಫ್ ಕಾಮಿಡಿ ಹಾಗೂ ಡಿಕ್ಲಮೇಷನ್ ಎಂಬ ನೂತನ ಪರಿಕಲ್ಪನೆಯ ಹೊಸ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗಾಯಕ ಶ್ರೀಹರ್ಷ, ಬಿಜಿಎಸ್ ಪಿಯು ಕಾಲೇಜುಗಳ ಡೀನ್ ಡಾ.ಎನ್. ಮಧುಸೂಧನ್, ಕಾಲೇಜಿನ ಪ್ರಾಂಶುಪಾಲ ಹೆಚ್. ಬಿ. ರಮೇಶ್, ಉಪ ಪ್ರಾಂಶುಪಾಲ ಜೆ. ಚಂದ್ರಮೋಹನ್ ಹಾಗೂ ಜ್ಯೋತಿ ಕಿರಣ್, ಬಿಜಿಎಸ್ ಶಾಲೆಯ ಮುಖ್ಯೋಪಾಧ್ಯಾಯ ಡಿ.ಸಿ. ಮೋಹನ್ ಕುಮಾರ್, ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.