ಅಪ್ರಾಪ್ತನಿಗೆ ವಾಹನ ಚಾಲನೆಗೆ ಅವಕಾಶ ನೀಡಿದ್ದ ವಾಹನ ಮಾಲೀಕರಿಗೆ ₹25 ಸಾವಿರ ದಂಡ, 1 ದಿನ ಸಾದಾ ಸಜೆ, ವಾಹನ ನೋಂದಣಿಯನ್ನು 1 ವರ್ಷದವರೆಗೆ ರದ್ದುಪಡಿಸಲಾಗಿದೆ 

 ದಾವಣಗೆರೆ : ಅಪ್ರಾಪ್ತನಿಗೆ ವಾಹನ ಚಾಲನೆಗೆ ಅವಕಾಶ ನೀಡಿದ್ದ ವಾಹನ ಮಾಲೀಕರಿಗೆ ₹25 ಸಾವಿರ ದಂಡ, 1 ದಿನ ಸಾದಾ ಸಜೆ, ವಾಹನ ನೋಂದಣಿಯನ್ನು 1 ವರ್ಷದವರೆಗೆ ರದ್ದುಪಡಿಸಲಾಗಿದೆ. ಅಲ್ಲದೇ, ವಾಹನ ಚಾಲನೆ ಮಾಡಿಕೊಂಡು ಬಂದ ಅಪ್ರಾಪ್ತನಿಗೆ 25 ವರ್ಷ ತುಂಬುವವರೆಗೂ ವಾಹನ ಚಾಲನಾ ಪರವಾನಿಗೆ ನೀಡದಂತೆ ನಗರದ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ನಗರದ ಅರುಣಾ ಎಲ್‌ಸಿ ಗೇಟ್ ಬಳಿ ಬಸವ ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌ ಎಂ.ನಂಜುಂಡ ಸ್ವಾಮಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅವರ ಸೂಚನೆಯಂತೆ ಡಿವೈಎಸ್‌ಪಿ ಶರಣ ಬಸವೇಶ್ವರ ಭೀಮರಾವ್ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಅಪ್ರಾಪ್ತರು ವಾಹನ ಚಾಲನೆ ಮಾಡುವುದನ್ನು ತಡೆಯಲು ಅಧಿಕಾರಿಗಳು ಮುಂದಾಗಿದ್ದರು.

ಅಂತೆಯೇ, ಫೆ.15ರಂದು ಸಂಜೆ ಅಪ್ರಾಪ್ತನೊಬ್ಬ ಆಕ್ಟಿವ್ ಹೊಂಡಾ ವಾಹನ ಚಾಲನೆ ಮಾಡಿಕೊಂಡು ಬಂದಾಗ ಸ್ಥಳದಲ್ಲೇ ಜಪ್ತಿ ಮಾಡಲಾಯಿತು. ಅಲ್ಲದೇ, ಬಸವ ನಗರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆ್ಯಕ್ಟ್‌ನಲಿ ಪ್ರಕರಣ ದಾಖಲಿಸಿ, ವಾಹನ ಮಾಲೀಕರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ಆರೋಪಿತ ಆಕ್ಟಿವ್ ಹೊಂಡಾ ವಾಹನ ಮಾಲೀಕನು ಅಪ್ರಾಪ್ತನಿಗೆ ಚಾಲನೆಗೆ ಕೊಟ್ಟಿದ್ದಕ್ಕೆ ಸಜೆ ಹಾಗೂ ದಂಡ ವಿಧಿಸಿದೆ.

ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮೇಲೂ ವಿಶೇಷ ಕಾರ್ಯಾಚರಣೆ ನಡೆಸಿ, ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬ ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸೂಚಿಸಿದ್ದಾರೆ.