ಸಾರಾಂಶ
ಶಿರಹಟ್ಟಿ: ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಚಲಾಯಿಸಲು ನಿರ್ದಿಷ್ಟ ವಯೋಮಾನದವರಾಗಿರಬೇಕು. ವಿವಿಧ ಮಾದರಿಯ ವಾಹನ ಚಲಾಯಿಸಲು ಕಾನೂನು ಪ್ರಕಾರ ನಿಯಮ ಪಾಲನೆ ಮಾಡಬೇಕು ಎಂದು ಶಿರಹಟ್ಟಿ ಪೊಲೀಸ್ ಠಾಣೆ ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.
ಗುರುವಾರ ತಾಲೂಕಿನ ಕಡಕೋಳ ಗ್ರಾಮದ ಬಸವರಾಜ ಮ.ಕೊಂಚಿಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧವಾದರೂ ನಮ್ಮಲ್ಲಿ ಅದು ತೀರಾ ಸಾಮಾನ್ಯವಾದ ವಿಚಾರ. ದಿನಾ ಬೆಳಗಾದರೆ ಹಲವಾರು ಅಪ್ರಾಪ್ತ ವಯಸ್ಸಿನವರು ಲೈಸನ್ಸ್ ಅಥವಾ ಪರವಾನಗಿ ಇಲ್ಲದೆಯೇ ಸ್ಕೂಟರ್,ಕಾರು ಮತ್ತು ಬೈಕ್ ಚಲಾಯಿಸುತ್ತಿರುವುದನ್ನು ನೋಡಿದ್ದೇವೆ. ಹಲವು ಬಾರಿ ಇವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗಲೂ ಬುದ್ದಿ ಹೇಳಿ ಕಳುಹಿಸಿದರೂ ಅದನ್ನು ಅರ್ಥೈಯಿಸಿಕೊಳ್ಳದೇ ಪದೇಪದೇ ಅದೇ ತಪ್ಪನ್ನು ಮಾಡುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
೧೮ ವರ್ಷದ ಒಳಗಿನ ಮಕ್ಕಳು ವಾಹನ ಚಾಲನೆ ಮಾಡಬಾರದು.ಕಾನೂನಲ್ಲಿ ಎಲ್ಲರೂ ೧೮ ವರ್ಷ ಮೇಲ್ಪಟ್ಟವರು ಎಲ್ಲ ದಾಖಲಾತಿ ಇದ್ದರೆ ಮಾತ್ರ ವಾಹನ ಚಾಲನೆ ಮಾಡಬೇಕು.ಸೀಟ್ ಬೆಲ್ಟ್, ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.ದೇಶದ ಅಭಿವೃದ್ಧಿಯೊಂದಿಗೆ ನಮ್ಮ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿರಬೇಕು ಎಂದರು.ಈಗ ಮೊಬೈಲ್ ಯುಗ ಪ್ರಾರಂಭವಾಗಿದ್ದು, ಸೈಬರ್ ಪ್ರಾಡ್ ಮಾಡುವವರು ಮೊಬೈಲ್ ಮೂಲಕ ಜನರಿಗೆ ಮೋಸ ಮಾಡುತ್ತಿದ್ದು, ಎಲ್ಲರೂ ಜಾಗರೂಕರಾಗಿರಬೇಕು.ಈಗಿನ ಮಕ್ಕಳು ಗಾಂಜಾ, ಡ್ರಗ್ಸ್‌ಗೆ ಹೆಚ್ಚು ಮೋರೆ ಹೋಗುತ್ತಿದ್ದು,ಇದರಿಂದ ಜೀವನ ಹಾಳಾಗುತ್ತಿದೆ.ದುಶ್ಚಟಕ್ಕೆ ಬಲಿಯಾಗದೇ ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು. ಭವಿಷ್ಯದ ಒಳ್ಳೆಯ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದರು.
ಪಿಎಸ್‌ಐ ಚನ್ನಯ್ಯ ದೇವೂರ ಮಾತನಾಡಿ, ವಿದ್ಯಾರ್ಥಿಗಳ ಜೀವನ ಗೋಲ್ಡನ್ ಲೈಫ್ ಅಂತ ಹೇಳುತ್ತಾರೆ.ನೀವು ನಿಮ್ಮ ವಿದ್ಯಾಭ್ಯಾಸ, ಜೀವನದ ಬಗ್ಗೆ ಮುಂದಿನ ಆಲೋಚನೆಗಳು ಇರಬೇಕು ಹಾಗೂ ತಮ್ಮ ತಂದೆ ತಾಯಿಗಳ ಬಗ್ಗೆ ಯೋಚನೆ ಮಾಡಿ ಒಳ್ಳೆಯ ವಿದ್ಯಾಭ್ಯಾಸ ಮಾಡಬೇಕು. ಕಾಲೇಜಿನಲ್ಲಿ ಮಹಿಳೆಯರಿಗೆ ಚುಡಾಯಿಸುವುದು,ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಜೀವನ ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು. ಮೊಬೈಲ್‌ನ್ನು ಕೆಟ್ಟದಕ್ಕೆ ಬಳಸಿಕೊಳ್ಳದೆ ತಮ್ಮ ಒಳ್ಳೆ ಜೀವನಕ್ಕೆ ಬಳಸಿಕೊಳ್ಳಬೇಕು. ಕಾನೂನನ್ನು ನೀವು ಗೌರವಿಸಿದರೆ ನಾವು ನಿಮಗೆ ಗೌರಿಸುತ್ತೇವೆ. ಹಾಗೇ ನೀವು ರಸ್ತೆ ಸಂಚಾರ ಪಾಲನೆ ಮಾಡಿದರೆ ನಾವು ನಿಮಗೆ ಗೌರವಿಸುತ್ತೇವೆ.ಇಲ್ಲವಾದಲ್ಲಿ ನಾವು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕನಕಾಂಬ, ಶರಣಪ್ಪ ಹರ್ಲಾಪೂರ, ಶರಣಪ್ಪ ಕಲಗುಡಿ, ಮಲ್ಲಪ್ಪ ಹರ್ತಿ, ಜ್ಯೋತಿ ಕೊಂಚಿಗೇರಿ, ರುದ್ರಗೌಡ ಪಾಟೀಲ, ಭರಮಪ್ಪ ಪೂಜಾರ ಹಾಗೂ ಕಾಲೇಜಿನ ಉಪನ್ಯಾಸಕರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.