ಹಾರೋಹಳ್ಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

| Published : Oct 09 2024, 01:33 AM IST

ಸಾರಾಂಶ

ಸುಮಾರು 8ರಿಂದ 10 ಕೋಟಿ ರು.ಗಳ ವೆಚ್ಚದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ ಚರಂಡಿ ಹಾಗೂ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದರ ಜೊತೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ದ್ಯಾವಸಂದ್ರ, ಭೀಮಸಂದ್ರ, ತಿಮ್ಮಸಂದ್ರ ಸೇರಿದಂತೆ ಕೆಲವು ಹಳ್ಳಿಗಳು ಸೇರಿಕೊಂಡಿದ್ದು ಇದಕ್ಕಾಗಿ 33 ಕೋಟಿ ರು. ಅನುದಾನ ಕೂಡ ಬಿಡುಗಡೆಯಾಗಿದೆ.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ಪಟ್ಟಣ ಪಂಚಾಯಿ ವ್ಯಾಪ್ತಿಯಲ್ಲಿರುವ ರಸ್ತೆಗಳು, ಚರಂಡಿಗಳು ಯಾವುದು ಕೂಡ ಸುಸ್ಥಿತಿಯಲ್ಲಿ ಇಲ್ಲ, ಈ ಕಾರಣಕ್ಕಾಗಿ ಹೊಸದಾಗಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಅಭಿವೃದ್ಧಿಗೆ ಚಾಲನೆ ನೀಡಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಹಾರೋಹಳ್ಳಿ ಪಟ್ಟಣ ಸೇರಿದಂತೆ ಹಲವೆಡೆ ಕೈಗೊಳ್ಳುತ್ತಿರುವ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ 4 ಕೋಟಿ ರು.ಗಳ ವೆಚ್ಚದ ಕಾಮಗಾರಿಗಳನ್ನು ಚಾಲನೆ ನೀಡಿದ್ದು, ಮುಂದಿನ ವಾರದೊಳಗೆ ಇನ್ನೂ 5 ಕೋಟಿಗಳ ವೆಚ್ಚದಲ್ಲಿ ಕಾಮಗಾರಿಗಳಿಗೆ ಟೆಂಡರ್‌ಗಳನ್ನು ಕರೆಯಲಾಗಿದೆ ಎಂದರು.

ಸುಮಾರು 8ರಿಂದ 10 ಕೋಟಿ ರು.ಗಳ ವೆಚ್ಚದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ ಚರಂಡಿ ಹಾಗೂ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದರ ಜೊತೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ದ್ಯಾವಸಂದ್ರ, ಭೀಮಸಂದ್ರ, ತಿಮ್ಮಸಂದ್ರ ಸೇರಿದಂತೆ ಕೆಲವು ಹಳ್ಳಿಗಳು ಸೇರಿಕೊಂಡಿದ್ದು ಇದಕ್ಕಾಗಿ 33 ಕೋಟಿ ರು. ಅನುದಾನ ಕೂಡ ಬಿಡುಗಡೆಯಾಗಿದೆ. ಇದಕ್ಕಾಗಿ ವರ್ಕ್ ಆರ್ಡರ್‌ಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಕಾವೇರಿ ಕುಡಿಯುವ ಶುದ್ಧ ನೀರು ಕಾಮಗಾರಿ ಚಾಲನೆ ನೀಡಬೇಕಾಗಿದೆ. ಇದಕ್ಕಾಗಿ ಬಾಕಿ ಅನುದಾನದ ಮೊತ್ತವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆದನ್ನು ಮಾಡಲಿ ಮಳೆ ಬೆಳೆ ಉತ್ತಮವಾಗಿ ರೈತರಿಗೆ ಶುಭವಾಗಲಿ. ರಾಜಕಾರಣದಲ್ಲಿ ವೈಯಕ್ತಿಕ ತೇಜವಧೆಗಳನ್ನು ಬಿಟ್ಟು ತಮ್ಮ ತಮ್ಮ ಕ್ಷೇತ್ರದ ಹಾಗೂ ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕು. ಈ ರೀತಿಯ ವಾತಾವರಣ ಮುಂದಿನ ಪೀಳಿಗೆಗೆ ಮಾರ್ಗದರ್ಶನ ವಾಗಿರುವುದಿಲ್ಲ ಇದನ್ನು ಇಲ್ಲಿಗೆ ನಿಲ್ಲಿಸಬೇಕೆಂದು ಇಕ್ಬಾಲ್ ಹುಸೇನ್ ಹೇಳಿದರು.

ಗಬ್ಬಾಡಿ, ಕೊಂಡೆಗೌಡನದೊಡ್ಡಿ ಗ್ರಾಮದಲ್ಲಿ ಚರಂಡಿ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಕೆ, ಚಾಮುಂಡೇಶ್ವರಿ ಬಡಾವಣೆಯಲ್ಲಿ, ಜನತಾ ಕಾಲೋನಿ, ರಂಗನಾಥ ಬಡಾವಣೆಗಳಲ್ಲಿ ಚರಂಡಿ, ರಸ್ತೆ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಕೆ ಕಾಮಗಾರಿ, ಕಳ್ಳಿಭೀಮಸಂದ್ರ, ಹಳೆ ಬೀದಿಯಲ್ಲಿ ರಸ್ತೆ ಅಭಿವೃದ್ಧಿ, ಎಲ್‌ಇಡಿ ಲೈಟ್ ಅಳವಡಿಕೆ ಹಾಗೂ ಕಾಂಪೌಂಡ್ ನಿರ್ಮಾಣ ಕಾಮಗಾರಿ, ತಾಮಸಂದ್ರ, ಗಾಣಾಳುದೊಡ್ಡಿ ಚರಂಡಿ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಕೆ, ಗಿರೇನಹಳ್ಳಿ, ಕುಲುಮೆಸಂದ್ರ, ಸಿದ್ದಾಪುರ ಮೇಡಮಾರನಹಳ್ಳಿಗಳಲ್ಲಿ ಚರಂಡಿ ನಿರ್ಮಾಣ ಮತ್ತು ಹೊಸ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಶಿವಕುಮಾರ್, ಪಟ್ಟಣ ಪಂಚಾಯಿತಿ ಅಧಿಕಾರಿ ಶ್ವೇತಾಬಾಯಿ, ಮಾಜಿ ಶಾಸಕ ಕೆ.ರಾಜು, ತಾಲೂಕು ಘಟಕದ ಅಧ್ಯಕ್ಷ ಜೆ.ಸಿ.ಬಿ ಅಶೋಕ್, ಬಮುಲ್ ನಿರ್ದೇಶಕ ಹರೀಶ್, ಅಣೆದೊಡ್ಡಿ ಸುಶೀಲ್‌ಕುಮಾರ್, ಬಾಲಾಜಿ, ಭುಜಂಗಯ್ಯ, ಎಚ್.ಕೆ.ನಾಗರಾಜು, ಕೋಟೆ ಸೋಮಣ್ಣ, ಸೊಂಟೇನಹಳ್ಳಿ ದಿನೇಶ್, ಕೋಟೆಕುಮಾರ್, ಸುರೇಶ್, ಮುತ್ತುರಾಜ್, ಶ್ರೀನಿವಾಸ್, ಮೋಹನ್, ಸುರೇಶ್.ಎಂ.ಡಿ, ಭಾರ್ಗವ, ಸುರೇಶ್, ವಿನಯ್ ಮತ್ತಿತರರು ಹಾಜರಿದ್ದರು.