ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಕ್ರೀಡಾಂಗಣ

ಕನ್ನಡಪ್ರಭ ವಾರ್ತೆ, ಕಡೂರು

ಇದೇ 10ರಿಂದ ಮೂರು ದಿನಗಳ ಕಾಲ ಪಟ್ಟಣದಲ್ಲಿ ನಡೆಯಲಿರುವ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ತಾಯಿ ಭುವನೇಶ್ವರಿ ರಥಕ್ಕೆ 21ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪೂಜೆ ಸಲ್ಲಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಬುಧವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ವೇದಿಕೆಯಿಂದ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಮತ್ತು ಜಿಲ್ಲಾ ಕಸಾಪದಿಂದ ಅಲಂಕೃತ ತಾಯಿ ಶ್ರೀ ಭುವನೇಶ್ವರಿಗೆ ಸಮ್ಮೇಳನ ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ರಥ ಆರಂಭವಾಗಿ ಜಿಲ್ಲೆಯ ಬೀರೂರು, ಅಜ್ಜಂಪುರ, ತರೀಕೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ಮತ್ತು ಚಿಕ್ಕಮಗಳೂರು ಮಾರ್ಗವಾಗಿ ಈ ರಥ ತೆರಳಿ ವಾಪಸ್ ಇಲ್ಲಿಗೆ ಬಂದು ತಲುಪಲಿದೆ. ಜಿಲ್ಲೆಯ ಸಾರ್ವಜನಿಕರು, ಕನ್ನಡ ಅಭಿಮಾನಿಗಳಿಗೆ ಸಮ್ಮೇಳನ ನೆನಪಿಸಲು ಹಾಗೂ ತಾಯಿ ಭುವನೇಶ್ವರಿ ರಥಕ್ಕೆ ಗೌರವಿಸಲು ಇದೇ ಮೊದಲ ಭಾರಿಗೆ ವಿನೂತನವಾಗಿ ಸಮ್ಮೇಳನದ ಪೂರ್ವಭಾವಿಯಾಗಿ ರಥ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದರು.

ಕನ್ನಡಿಗರ ಆರಾಧ್ಯ ದೇವತೆ ಮತ್ತು ಕರ್ನಾಟಕದ ಸಾಂಸ್ಕೃತಿಕ ಅಧಿದೇವತೆಯಾದ ತಾಯಿ ಭುವನೇಶ್ವರಿ ಕನ್ನಡ ಸಮ್ಮೇಳನಕ್ಕೆ ಶುಭಕೋರಲಿ ಎಂಬ ನಿಟ್ಟಲ್ಲಿ ರಥಯಾತ್ರೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.


ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಕಡೂರಿನಲ್ಲಿ ಆಯೋಜಿಸಿರುವ ಸಾಹಿತ್ಯ ಸಮ್ಮೇಳನ ವಿಶಿಷ್ಟ, ಹಾಗೂ ವಿಜೃಂಭಣೆಯಿಂದ ನಡೆಯಲಿದೆ. ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಹಿರಿಮೆ, ಗರಿಮೆ ಇದೆ. ಸಾಹಿತಿಗಳು, ವಿದ್ಯಾರ್ಥಿಗಳು, ಉದಯೋನ್ಮುಖ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.

ಕನ್ನಡ ಅಭಿಮಾನ ಒಂದು ದಿನಕ್ಕೆ ಸೀಮಿತವಾಗಿಲ್ಲ. ಹುಟ್ಟಿ ಸಾಯುವ ತನಕ ಭಾಷಾಭಿಮಾನ ನಮ್ಮ ರಕ್ತದಲ್ಲಿಯೆ ಇರುತ್ತದೆ. ಕನ್ನಡ ಬಳಸುವ ಜಾಗೃತಿ ಮೂಡಿಸಿ ಅಸ್ಥಿತ್ವ ಉಳಿಸಿಕೊಳ್ಳೋಣ, ಭಾಷೆಯನ್ನು ಹೆಚ್ಚಿಗೆ ಬಳಸುವುದರಿಂದ ಬೆಳೆಸಲು ಸಾಧ್ಯವಿದೆ. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿದರು. ಕಡೂರು ತಾಲೂಕು ಕಸಾಪ ಅಧ್ಯಕ್ಷ ಪರಮೇಶ್, ಟಿ.ಡಿ.ಸತ್ಯನ್, ಕೃಷ್ಣಸ್ವಾಮಿ, ಲತಾ ರಾಜಶೇಖರ್ ಮತ್ತಿತರರು ಇದ್ದರು.

8ಕೆಕೆಡಿಯು1.

21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಯಿ ಶ್ರೀ ಭುವನೇಶ್ವರಿ ರಥಕ್ಕೆ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕಡೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.