ಐಎಸ್‌ಪಿಆರ್‌ಎಲ್ ಮೇಲೆ ಡ್ರೋನ್ ದಾಳಿ, ಇಬ್ಬರು ಬಲಿ!

| Published : May 20 2025, 01:05 AM IST

ಸಾರಾಂಶ

ಆಪರೇಷನ್ ಅಭ್ಯಾಸ್ ರಕ್ಷಣಾ ಕಾರ್ಯಾಚರಣೆಯಲ್ಲಿ ಕಂದಾಯ, ಪೊಲೀಸ್, ಅಗ್ನಿ ಶಾಮಕ, ಕೈಗಾರಿಕಾ ಭದ್ರತಾ ಪಡೆ, ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್, ಆರ್‌ಟಿಒ, ಆರೋಗ್ಯ, ಮೆಸ್ಕಾಂ, ಎಸ್‌ಡಿಆರ್‌ಎಫ್ ತಂಡ, ಗೃಹರಕ್ಷಕದಳದವರು, ಐಎಸ್‌ಪಿಆರ್‌ಎಲ್‌ನ ರಕ್ಷಣಾ ಸಿಬ್ಬಂದಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಇದು ‘ಆಪರೇಷನ್ ಅಭ್ಯಾಸ್’ ಅಣಕು ಕಾರ್ಯಾಚರಣೆ । ತುರ್ತು ಸಂದರ್ಭ ಎದುರಿಸಲು ಸಿದ್ಧತೆ

ಕನ್ನಡಪ್ರಭ ವಾರ್ತೆ ಉಡುಪಿಕಾಪು ತಾಲೂಕಿನ ಪಾದೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ದೇಶಕ್ಕೆ ತುರ್ತು ಸಂದರ್ಭದಲ್ಲಿ ತೈಲ ಒದಗಿಸುವ ಭೂ ಅಂತರ್ಗತ ಸಂಗ್ರಹಣಾಗಾರ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐ.ಎಸ್.ಪಿ.ಆರ್.ಎಲ್) ಮೇಲೆ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ವೈರಿದೇಶ ಎರಡು ಡ್ರೋನ್‌ಗಳ ಮೂಲಕ ಬಾಂಬ್ ಹಾಕಿದ್ದು, ಸಂಸ್ಥೆಯ ಇಬ್ಬರು ಸಿಬ್ಬಂದಿ ಬಲಿಯಾಗಿದ್ದಾರೆ.ಬಾಂಬ್ ಸ್ಫೋಟದಿಂದ ಕಂಪನಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಸುಮಾರು 35 ಸಿಬ್ಬಂದಿ ಗಾಯಗೊಂಡಿದ್ದಾರೆ.

ಮೊದಲ ಬಾಂಬ್ ಸ್ಫೋಟ ಆದ ತಕ್ಷಣ ಕಂಪನಿಯ ಸೈರನ್ ಜೋರಾಗಿ ಮೊಳಗಿ, ಅಪಾಯದ ಮುನ್ಸೂಚನೆ ನೀಡಿತು ಮತ್ತು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು. ಐಎಸ್‌ಪಿಆರ್‌ಎಲ್‌ನ ಬೆಂಕಿ ನಂದಕ ವಾಹನವು ಕಂಪನಿಯ ಒಳಭಾಗದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿತು.

ಕೆಲವೇ ನಿಮಿಷಗಳಲ್ಲಿ ಧಾವಿಸಿ ಬಂದ ಸ್ಥಳೀಯ ಅದಾನಿ ಕಂಪನಿಯ ಫೈರ್‌ ಇಂಜಿನ್ ಹೊರಭಾಗದ ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡಿತು. ಅಷ್ಟರೊಳಗೆ ಕಾರ್ಕಳದಿಂದ ಬಂದ ಅಗ್ನಿ ಶಾಮಕ ವಾಹನ ಕೂಡ ಕಾರ್ಯಾಚರಣೆಯಲ್ಲಿ ಕೈಜೋಡಿಸಿತು.

ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ತುರ್ತು ಕಾರ್ಯಾಚರಣೆ ಶುರು ಮಾಡಿದರು. ಕಂಪನಿಯ ಒಳಗೆ ಕಾರ್ಯನಿರ್ವಹಿಸುತ್ತಿದ್ದ 35 ಜನರಿಗೆ ಗಾಯಗಳಾಗಿದ್ದು, ಅವರನ್ನು ಇತರ ಸಿಬ್ಬಂದಿ ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಸಂಚಾರ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಿದರು. ಕಾಪುವಿನ ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ದಾದಿಯರು ಕೊಡಲೇ ಆಗಮಿಸಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ ಮೂಲಕ ಹತ್ತಿರದ ಆಸ್ಪತ್ರೆಗೆ ರವಾನಿಸಿದರು.

ಸ್ಫೋಟ ನಡೆದ 40 ನಿಮಿಷದೊಳಗಾಗಿ ಮಂಗಳೂರಿನ ಎಸ್‌ಡಿಆರ್‌ಎಫ್ ತಂಡವು ಆಗಮಿಸಿ ಸಂಪೂರ್ಣ ಕಾರ್ಯಾಚರಣೆಯನ್ನು ಆರಂಭಿಸಿತು.

ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ನಾಯಿ ಸಹಾಯದಿಂದ ಸಜೀವ ಬಾಂಬ್‌ಗಳ ಇರುವಿಕೆಯ ಬಗ್ಗೆ ಪರಿಶೀಲನೆ ನಡೆಸಿತು. ಕ್ವಿಕ್ ರಿಯಾಕ್ಷನ್ ಫೋರ್ಸ್ ತಂಡದವರು ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡರು.ಸ್ಫೋಟದಲ್ಲಿ ಇಬ್ಬರು ಮೃತಪಟ್ಟರೆ, 12 ಗಾಯಾಳುಗಳನ್ನು ಕಾಪುವಿನ ಆಸ್ಪತ್ರೆಗೆ ಹಾಗೂ 20 ಜನರನ್ನು ಶಿರ್ವದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಒಬ್ಬರು ತುರ್ತು ನಿಗಾ ಘಟಕದಲ್ಲಿದ್ದಾರೆ.

ಘಟನಾ ಪ್ರದೇಶದ ಸುತ್ತಮುತ್ತಲಿನ ನೀವಾಸಿಗಳನ್ನು ಹತ್ತಿರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಇದಾಗುವಷ್ಟರಲ್ಲಿ ವೈರಿ ದೇಶ 2ನೇ ಬಾರಿ ಡ್ರೋನ್ ಮೂಲಕ ಬಾಂಬ್ ಎಸೆದಿದ್ದು, ಅದು ಗುರಿ ತಪ್ಪಿ ಐಎಸ್‌ಪಿಆರ್‌ಎಲ್‌ನ ಗೇಟ್‌ ಬಳಿ ಬಿದ್ದಿದ್ದು, ಕ್ವಿಕ್ ರೆಸ್ಪಾನ್ಸ್ ಟೀಮ್‌ನವರು ಅದನ್ನು ತಕ್ಷಣ ನಿಷ್ಕ್ರಿಯಗೊಳಿಸಿದರು. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ.

4.55ರ ಸಮಯಕ್ಕಾಗಲೇ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು. ಎಸ್‌ಡಿಆರ್‌ಎಫ್‌ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಯಾವುದೇ ಕಾರ್ಯಾಚರಣೆಗೆ ಸನ್ನದ್ಧವಾಗಿದೆ.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಭೇಟಿ ಮಾಡಿ, ನಂತರ ಸ್ಫೋಟ ಸಂಭವಿಸಿದ ಸ್ಥಳ ಪರಿಶೀಲನೆ ಮಾಡಿದರು.

ಸಂಜೆ ನಿಗದಿತ 5.30ರ ಹೊತ್ತಿಗಾಗಲೇ ಪರಿಸ್ಥಿತಿಯು ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ಬರುವುದರೊಂದಿಗೆ ಅಣುಕು ಪ್ರದರ್ಶನವು ಮುಕ್ತಾಯಗೊಂಡಿತು.

ಒಂಡೆದೆ ಡ್ರೋನ್ ಮೂಲಕ ಬಾಂಬ್ ಸ್ಫೋಟ, ಇನ್ನೊಂದೆಡೆ ಬೆಂಕಿ ಅನಾಹುತ, ತುರ್ತು ವಿಕೋಪದ ಸಂದರ್ಭವನ್ನು ಸೃಷ್ಟಿಸಿ ಆಪರೇಷನ್ ಅಭ್ಯಾಸ್ ಎಂಬ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಟಿಸಿ, 270ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ತಾಲೀಮು ನಡೆಸಿದರು.

ಆಪರೇಷನ್ ಅಭ್ಯಾಸ್ ರಕ್ಷಣಾ ಕಾರ್ಯಾಚರಣೆಯಲ್ಲಿ ಕಂದಾಯ, ಪೊಲೀಸ್, ಅಗ್ನಿ ಶಾಮಕ, ಕೈಗಾರಿಕಾ ಭದ್ರತಾ ಪಡೆ, ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್, ಆರ್‌ಟಿಒ, ಆರೋಗ್ಯ, ಮೆಸ್ಕಾಂ, ಎಸ್‌ಡಿಆರ್‌ಎಫ್ ತಂಡ, ಗೃಹರಕ್ಷಕದಳದವರು, ಐಎಸ್‌ಪಿಆರ್‌ಎಲ್‌ನ ರಕ್ಷಣಾ ಸಿಬ್ಬಂದಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಾಚರಣೆ ಉದ್ದೇಶ: ಡಿಸಿಅಣುಕು ಪ್ರದರ್ಶನದ ನಂತರ ಜಿಲ್ಲಾಧಿಕಾರಿಗಳೂ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷ ಡಾ.ಕೆ.ವಿದ್ಯಾಕುಮಾರಿ, ಈ ರೀತಿಯ ಆಪರೇಷನ್ ಅಭ್ಯಾಸ್ ಉದ್ದೇಶ ವಿಕೋಪ ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರಾಣಹಾನಿ ಹಾಗೂ ಆಸ್ತಿ ಹಾನಿ ತಡೆಗಟ್ಟುವುದರ ಜೊತೆಗೆ ರಕ್ಷಣೆ ಒದಗಿಸುವುದೇ ಮುಖ್ಯವಾಗಿದೆ ಎಂದರಲ್ಲದೇ, ಘಟನೆ ನಡೆದ 40 ನಿಮಿಷದ ಒಳಗಾಗಿ ಮಂಗಳೂರಿನ ಎಸ್‌ಡಿಆರ್‌ಎಫ್ ತಂಡವು ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ಕೈಗೊಂಡಿರುವುದು ವಿಶೇಷವಾಗಿತ್ತು ಎಂದರು.

ಕಾರ್ಯಾಚರಣೆಯಲ್ಲಿ ಎಸ್ಪಿ ಡಾ. ಅರುಣ್ ಕೆ., ಎಎಸ್‌ಪಿ ಪಿ.ಎ. ಹೆಗಡೆ, ಸಹಾಯಕ ಕಮೀಷನರ್ ರಶ್ಮಿ ಎಸ್., ಐ.ಎಸ್.ಪಿ.ಆರ್.ಎಲ್‌ನ ಮುಖ್ಯ ಸೈಟ್ ಇನ್‌ಚಾರ್ಜರ್ ಜಿ.ಕೆ. ಯುವರಾಜ್, ಕಾಪು ತಹಸೀಲ್ದಾರ್ ಪ್ರತಿಭಾ, ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾಯ, ಜಿಲ್ಲಾ ಆರ್‌ಟಿಓ ಅಧಿಕಾರಿ ಎಲ್.ಪಿ ನಾಯಕ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಾಹಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು........ತುರ್ತು ಸಹಾಯವಾಣಿತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ: 0820-2574802 ಅಥವಾ 1077 ಹಾಗೂ ಪೊಲೀಸ್ ಕಚೇರಿಯ ಸಹಾಯವಾಣಿ ಸಂಖ್ಯೆ: 112 (ಕಂಟ್ರೋಲ್ ರೂಂ ನಂಬರ್ 0820-2526444) ಕರೆ ಮಾಡಬಹುದು.