ದಂಡ, ಕೇಸು ತಪ್ಪಿಸಿಲು ಕ್ವಾರಿ ಮುಚ್ಚಲು ಮುಂದಾದ ಹಿರೀಕಾಟಿ ಕೆಲ ಲೀಸ್‌ದಾರರು?ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗಣಿಗಾರಿಕೆಗೆ ಮಂಜೂರು ಕಲ್ಲು ಗಣಿ ಗುತ್ತಿಗೆ ಪ್ರದೇಶಗಳ ಡ್ರೋನ್ ಸಮೀಕ್ಷೆಗೆ ಹೆದರಿ ತಾಲೂಕಿನ ಹಿರೀಕಾಟಿ ಸ.ನಂ.೧೦೮ ರಲ್ಲಿನ ಆಳ, ಅಗಲ ಹಾಗೂ ಒತ್ತುವರಿ ಮಾಡಿದ ಲೀಸ್‌ದಾರರು ಕ್ವಾರಿಯ ಆಳಕ್ಕೆ ಕ್ರಸರ್ ಸ್ಲರಿ (ತ್ಯಾಜ್ಯ) ವನ್ನು ಸುರಿದು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ. ಸರ್ಪೆಸ್ ಪ್ಲಾನ್ ತಯಾರಿಸಿ ರೆಡ್ಯೂಸ್ಡ್ ಲೆವಲ್ ಘನೀಕರಿಸಿ ಹಾಗೂ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ತೆಗೆದಿರುವ ಉಪ ಖನಿಜದ ಪರಿಮಾಣ (ವಾಲ್ಯೂ) ಅಂದಾಜಿಸಿ ದೃಡೀಕೃತ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕರ್ನಾಟಕ ಸ್ಟೇಟ್ ರಿಮೂಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ (ಕೆಎಸ್‌ಆರ್‌ಎಸ್‌ಎಸಿ) ಗೆ ಆದೇಶ ನೀಡಿತ್ತು.ಗಣಿ ಭೂ ವಿಜ್ಞಾನ ಇಲಾಖೆ ಸೂಚನೆಯಂತೆ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳ ಡ್ರೋನ್ ಮೂಲಕ ಡಿಜಿಪಿಎಸ್ ಸಮೀಕ್ಷೆ ತಂಡ ಜಿಲ್ಲೆಗೆ ಆಗಮಿಸಿದ್ದು ಬಹುತೇಕ ಕ್ವಾರಿಗಳಲ್ಲಿ ಆಳ ಮತ್ತು ಆಗಲ, ಗಣಿ ಗುತ್ತಿಗೆಗಿಂತ ಹೆಚ್ಚು ಒತ್ತವರಿ ಹಾಗೂ ಅಕ್ರಮ ಸ್ಥಳ ಪರಿಶೀಲನೆಗೆ ಮುಂದಾಗಿದ್ದಾರೆ.ಗಣಿ ಗುತ್ತಿಗೆ ಲೀಸ್ ಪಡೆದವರಲ್ಲಿ ಅಕ್ರಮ ಗಣಿಗಾರಿಕೆ, ಒತ್ತವರಿ ಮಾಡಿರುವ ಕ್ವಾರಿ ಮಾಲೀಕರಿಗೆ ಡ್ರೋನ್/ಡಿಜಿಪಿಎಸ್ ಸರ್ವೇಯಿಂದ ನಡುಕ ಹುಟ್ಟಿದ್ದು ಕೆಲ ಕ್ವಾರಿ ಮಾಲೀಕರು ಕ್ವಾರಿಗೆ ಕ್ರಸರ್‌ನ ಸ್ಲರಿ ಹಾಗೂ ಮಣ್ಣು ಹಾಕಿ ಮುಚ್ಚುವ ಕೆಲಸ ತಾಲೂಕಿನ ಹಿರೀಕಾಟಿ ಬಳಿಯ ಕ್ವಾರಿಯಲ್ಲಿ ಕೆಲ ತಿಂಗಳ ನಡೆದಿತ್ತು. ಈಗ ಮತ್ತೆ ಕ್ವಾರಿ ಮುಚ್ಚಲು ಕೆಲ ಲೀಸ್‌ದಾರರು ಮುಂದಾಗಿದ್ದಾರೆ. ಹಿರೀಕಾಟಿ ಗ್ರಾಮದ ಸ.ನಂ.೧೦೮ ಕ್ವಾರಿ ಲೀಸ್ ಪಡೆದ ಐದಾರು ಮಂದಿ ಲೀಸ್‌ದಾರರು ಅಕ್ರಮ ಹಾಗೂ ಒತ್ತುವರಿ ಮಾಡಿರುವ ಕ್ವಾರಿಯ ನೂರಾರು ಆಳವನ್ನು ಕ್ರಸರ್‌ನ ಸ್ಲರಿಯನ್ನು ಕ್ವಾರಿ ಟಿಪ್ಪರ್‌ಗಳ ಮೂಲಕ ಸುರಿವ ದೃಶ್ಯವನ್ನು ಗ್ರಾಮದ ಯುವಕರು ಸೆರೆ ಹಿಡಿದು ಕನ್ನಡಪ್ರಭಕ್ಕೆ ಕಳುಹಿಸಿದ್ದಾರೆ.ಜಿಲ್ಲೆಯಲ್ಲಿ ಕ್ವಾರಿಗಳ ಸಮೀಕ್ಷೆ ಆರಂಭಿಸಿರುವ ಮಾಹಿತಿ ಅರಿತ ಕೆಲ ಕ್ವಾರಿ ಮಾಲೀಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಮೀಕ್ಷೆ ದಿಕ್ಕು ತಪ್ಪಿಸಲು ಆಳ-ಅಗಲ ಮತ್ತು ಒತ್ತುವರಿ ಜೊತೆಗೆ ಹೆಚ್ಚುವರಿ ಅಕ್ರಮ ಕ್ವಾರಿಯ ಜಾಗಕ್ಕೆ ಮಣ್ಣು ಹಾಕುತ್ತಿದ್ದಾರೆ.ಜಿಲ್ಲಾ ಟಾಸ್ಕ್ ಪೋರ್ಸ್ ಗೊತ್ತಿಲ್ವ?ಅಕ್ರಮ ಗಣಿಗಾರಿಕೆ ಬಂಡವಾಳ ಬಯಲಾಗುತ್ತದೆ ಎಂದು ಕೆಲ ಕ್ವಾರಿ ಮಾಲೀಕರು ಸಮೀಕ್ಷೆಯಲ್ಲಿ ಅಕ್ರಮ ಕಂಡು ಬಂದರೆ ಭಾರಿ ಪ್ರಮಾಣದ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಕ್ವಾರಿಗೆ ಮಣ್ಣು ತುಂಬಿದ್ದಾರೆ, ತುಂಬುವ ಪ್ರಯತ್ನದಲ್ಲಿ ಇರುವುದು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗೆ ಗೊತ್ತಿಲ್ವ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಮಿನಿ ಬಳ್ಳಾರಿ ಎಂದೇ ಹೇಳಬಹುದಾದ ಹಿರೀಕಾಟಿ ಗ್ರಾಮದ ಬಳಿ ಸರ್ಕಾರಿ ೧೦೫ ಎಕರೆ ಜಾಗದಲ್ಲಿ ೨೦ ಎಕರೆಯಷ್ಟು ಲೀಸ್ ಪಡೆದು ಶೇ.೭೦ ರಷ್ಟು ಪ್ರದೇಶದಲ್ಲಿ ಗಣಿಗಾರಿಕೆ ನಡೆದಿದೆ. ಈ ಬಗ್ಗೆ ಏಕೆ ಜಿಲ್ಲಾಡಳಿತ ತನಿಖೆ ಮಾಡಿಸುತ್ತಿಲ್ಲ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ ಆದರೂ ಕ್ರಮವಂತೂ ಆಗುತ್ತಿಲ್ಲ ಎಂಬ ಬೇಸರವನ್ನು ಸಮಿತಿ ಪದಾಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಸ.ನಂ.೧೦೮ ರ ಸರ್ಕಾರಿ ಜಾಗದಲ್ಲಿ ಪುರಾತನ ದೇವಾಲಯ, ದಲಿತ ಸ್ಮಶಾನ, ಕೃಷ್ಣಾಪುರಕ್ಕೆ ತೆರಳುವ ಸಂಪರ್ಕ ರಸ್ತೆ ಇದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದ ಇಲಾಖೆಗಳ ಎಲ್ಲಾ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ.ಕ್ವಾರಿ ಆಳ ನೋಡಿದ್ರೆ ಭಯವಾಗುತ್ತೇ !ಹಿರೀಕಾಟಿ ಕ್ವಾರಿಯ ಆಳ ನೋಡಿದರೆ ಮೈ ಜುಮ್ಮೆನ್ನುತ್ತೆ. ಕ್ವಾರಿ ಆಳ ಕನಿಷ್ಟ ನೂರರಿಂದ ೨೦೦ ಅಡಿಗೂ ಆಳವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.ಹಿರೀಕಾಟಿ ಕ್ವಾರಿಯಲ್ಲಿ ಆಳ ಹೆಚ್ಚಾಗಿದೆ. ಕ್ವಾರಿ ಕೆಳಗೆ ಕಣ್ಣಾಡಿಸಿದರೆ ಟಿಪ್ಪರ್‌ಗಳು ಬೆಂಕಿ ಪೊಟ್ಟಣದಂತೆ ಕಾಣುತ್ತಿವೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಲ್ಲು ದಂಧೆ ನಡೆಯುತ್ತಿದೆ. ಜೊತೆಗೆ ಪ್ರತಿ ನಿತ್ಯ ಲಕ್ಷಾಂತರ ರಾಜಧನ ವಂಚನೆ ಆಗುತ್ತಿದೆ ಎಂದು ಹಿರೀಕಾಟಿ ಗ್ರಾಮದ ಯುವಕ ಪ್ರಸನ್ನ ದಿನೇಶ್ ಹೇಳಿದ್ದಾರೆ.
ಕ್ವಾರಿ ಆಳ, ಅಗಲಕ್ಕೆ ಡ್ರೋನ್ ಸಮೀಕ್ಷೆ
ಗಣಿಗಾರಿಕೆಗೆ ಮಂಜೂರು ಕಲ್ಲು ಗಣಿ ಗುತ್ತಿಗೆ ಪ್ರದೇಶಗಳ ಡ್ರೋನ್ ಸಮೀಕ್ಷೆಗೆ ಹೆದರಿ ತಾಲೂಕಿನ ಹಿರೀಕಾಟಿ ಸ.ನಂ.೧೦೮ ರಲ್ಲಿನ ಆಳ, ಅಗಲ ಹಾಗೂ ಒತ್ತುವರಿ ಮಾಡಿದ ಲೀಸ್‌ದಾರರು ಕ್ವಾರಿಯ ಆಳಕ್ಕೆ ಕ್ರಸರ್ ಸ್ಲರಿ (ತ್ಯಾಜ್ಯ) ವನ್ನು ಸುರಿದು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.