ಗ್ರಾಮವಾಸಿಗಳ ಆಸ್ತಿ ನಿಖರತೆಗೆ ಡ್ರೋನ್ ಸಮೀಕ್ಷೆ ಶುರು: ಸಚಿವ ಲಾಡ್‌

| Published : Jan 19 2025, 02:15 AM IST

ಗ್ರಾಮವಾಸಿಗಳ ಆಸ್ತಿ ನಿಖರತೆಗೆ ಡ್ರೋನ್ ಸಮೀಕ್ಷೆ ಶುರು: ಸಚಿವ ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮವಾಸಿಗಳ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ರಾಜ್ಯದ ಪ್ರತಿ ಗ್ರಾಮವನ್ನು ಸ್ವಾಮಿತ್ವ ಯೋಜನೆಯಡಿ ಸಮೀಕ್ಷೆ ಮಾಡಿ, ಕಾನೂನಾತ್ಮಕವಾಗಿ ಗ್ರಾಮ ನಿವಾಸಿಗಳ ಆಸ್ತಿ ಗುರುತಿಸುವಿಕೆ ಮಾಡಲಾಗುತ್ತದೆ.

ಕಲಘಟಗಿ:

ಅನೇಕ ಗ್ರಾಮವಾಸಿಗಳು ಹಲವು ವರ್ಷಗಳಿಂದ ಅದೇ ಜಾಗದಲ್ಲಿದ್ದರೂ ಅವರಲ್ಲಿ ಸರಿಯಾದ ಅಳತೆ ಇಲ್ಲ. ಇದರಿಂದ ವ್ಯಾಜ್ಯ, ಆರ್ಥಿಕ ನಷ್ಟಗಳು ಆಗುತ್ತಿವೆ. ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆ ಮೂಲಕ ಎಲ್ಲ 375 ಗ್ರಾಮಗಳನ್ನು ಡ್ರೋನ್ ಮೂಲಕ ಸರ್ವೇ ಮಾಡಿ, ಮಾಲೀಕರಿಗೆ ಅವರವರ ಆಸ್ತಿಯನ್ನು ನಿಖರವಾಗಿ ಗುರುತಿಸಲಾಗುತ್ತದೆ. ಇದಕ್ಕೆ ಗ್ರಾಮಸ್ಥರ, ಗ್ರಾಮ ಪ್ರತಿನಿಧಿಗಳ ಸಹಕಾರ ಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಸ್ವಾಮಿತ್ವ ಯೋಜನೆಯಡಿ ಡ್ರೋನ್ ಸರ್ವೇ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದ ಅವರು, ಗ್ರಾಮವಾಸಿಗಳ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ರಾಜ್ಯದ ಪ್ರತಿ ಗ್ರಾಮವನ್ನು ಸ್ವಾಮಿತ್ವ ಯೋಜನೆಯಡಿ ಸಮೀಕ್ಷೆ ಮಾಡಿ, ಕಾನೂನಾತ್ಮಕವಾಗಿ ಗ್ರಾಮ ನಿವಾಸಿಗಳ ಆಸ್ತಿ ಗುರುತಿಸುವಿಕೆ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲ ಎಂದರು.ಇದು ಹೊಸ ಯೋಜನೆ ಆಗಿರುವುದರಿಂದ ಪರಸ್ಪರರಲ್ಲಿ ಸಮಸ್ಯೆ ಸಹಜ. ಊರಿನ ಪ್ರಮುಖರು, ಜನಪ್ರತಿನಿಧಿಗಳು ಸಹಕಾರ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದ ಅವರು, ಡ್ರೋನ್ ಮೂಲಕ ಏರಿಯಲ್ ಸರ್ವೇ ಮತ್ತು ರೋವರ್ ಸರ್ವೇ ಎರಡನ್ನು ಮಾಡಲಾಗುತ್ತದೆ. ಇದು ಭವಿಷ್ಯತ್ತಿನಲ್ಲಿ ಬಹಳಷ್ಟು ಉಪಯೋಗವಾಗುತ್ತದೆ ಎಂದು ಹೇಳಿದರು.ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಮೋಹನ ಶಿವಣ್ಣವರ ಪ್ರಾಸ್ತಾವಿಕ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆ ಇದಾಗಿದ್ದು, ಭೂಮಾಪನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಗ್ರಾಮಕ್ಕೆ ಆಗಮಿಸಿ, ನಿವಾಸಿಗಳ ಆಸ್ತಿ ದಾಖಲಿಸುವ ಕಾರ್ಯಕ್ಕೆ ಮತ್ತು ಗಡಿ ಗುರುತಿಸುವಿಕೆಗೆ ಸಹಕರಿಸಬೇಕು. ದಾಖಲಿಕರಣ ಪೂರ್ವದಲ್ಲಿ ಮಾಲೀಕರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು 30 ದಿನಗಳ ಕಾಲವಾಕಾಶವಿದೆ ಎಂದರು.

ತಹಸೀಲ್ದಾರ್‌ ವೀರೇಶ ಮುಳಗುಂದಮಠ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಕಲಘಟಗಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಮಂಜೇಶ, ಮಡಕಿಹೊನ್ನಳ್ಳಿ ಗ್ರಾಪಂ ಅಧ್ಯಕ್ಷ ಬಸವರಾಜ ಪರ್ವಾಪುರ, ಉಪಾಧ್ಯಕ್ಷೆ ರೇಣುಕಾ ಕುಬಿಹಾಳ, ಪ್ರಮುಖರಾದ ಶಿವಪುತ್ರಪ್ಪ ಆಲದಕಟ್ಟಿ, ಮಂಜುನಾಥ ಮರಳ್ಳಿ, ಪಿಡಿಒ ಶಂಭುಲಿಂಗ ಹೊಸಮನಿ, ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಇದ್ದರು.

ಸ್ವಾಮಿತ್ವ ಕಾರ್ಡ್ ಮತ್ತು ಪ್ರಯೋಜನ

ಸ್ವಾಮಿತ್ವ ಆಸ್ತಿ ಕಾರ್ಡ್‌ಗಳು ಭೂಮಾಲೀಕರಿಗೆ ಅಧಿಕೃತ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಭವಿಷ್ಯದ ಹಣಕಾಸಿನ ವಹಿವಾಟುಗಳು ಮತ್ತು ಆಸ್ತಿ-ಸಂಬಂಧಿತ ವ್ಯವಹಾರಗಳನ್ನು ಸುಗಮಗೊಳಿಸುತ್ತದೆ. ಈ ಯೋಜನೆಯು ಆಸ್ತಿ ಹಕ್ಕುಗಳು ಮತ್ತು ಮಾಲೀಕತ್ವದ ಬಗ್ಗೆ ಸ್ಪಷ್ಟತೆ ನೀಡುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಮತ್ತು ಆಸ್ತಿ-ಸಂಬಂಧಿತ ವಿವಾದಗಳನ್ನು ಪರಿಹರಿಸುವ ಗುರಿ ಹೊಂದಿದೆ. ನಿಖರವಾದ ಭೂ ದಾಖಲೆ ಮತ್ತು ಆಸ್ತಿ ಮೌಲ್ಯೀಕರಣದ ಮೂಲಕ, ಭೂಮಿಯನ್ನು ವಶಪಡಿಸಿಕೊಳ್ಳುವ ಅಕ್ರಮ ಪ್ರಯತ್ನ ತಡೆಗಟ್ಟಲು ಮತ್ತು ಗ್ರಾಮೀಣ ಆಸ್ತಿ ಮಾಲೀಕರಿಗೆ ಸರಿಯಾದ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಯೋಜನೆಯು ಗುರಿ ಹೊಂದಿದೆ.