ತಪ್ಪಿಸಿಕೊಂಡ ಕೈದಿಗಳನ್ನು ಆದಷ್ಟು ಬೇಗ ಜೈಲು ಕಂಬಿಗಳ ಹಿಂದೆ ತಳ್ಳಲು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರ ನೇತೃತ್ವದಲ್ಲಿ ಜಾಲ ಬೀಸಿದೆ.
ಕನ್ನಡಪ್ರಭ ವಾರ್ತೆ ಬೀದರ್
ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ ಮೂವರು ಸಜಾ ಕೈದಿಗಳ ಪೈಕಿ ಓರ್ವನನ್ನು ಬೀದರ್ ಪೊಲೀಸರು ಹುಮನಾಬಾದ್ ಬಳಿ ಯಶಸ್ವಿಯಾಗಿ ಬಂಧಿಸಿದ್ದು, ಇನ್ನುಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.ತಲೆಮರೆಸಿಕೊಂಡಿರುವ ಕೈದಿಗಳು ಹುಮನಾಬಾದ್‌ನ ಕೈಗಾರಿಕಾ ಪ್ರದೇಶದಲ್ಲಿ ಅಡಗಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಅವರನ್ನು ಸೆರೆ ಹಿಡಿಯಲು ಪೊಲೀಸರು ಆಧುನಿಕ ಡ್ರೋನ್ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್‌ನಲ್ಲಿದ್ದ ಕೈದಿಯ ಸಿನಿಮೀಯ ಶೈಲಿಯಲ್ಲಿ ಬಂಧನ :ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಕೈದಿಗಳು ಜಿಲ್ಲೆಯನ್ನು ದಾಟದಂತೆ ಬೀದರ್ ಪೊಲೀಸರು ಪ್ರಮುಖ ರಸ್ತೆ ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸಿದ್ದರು. ಪ್ರತಿಯೊಂದು ಬಸ್ ಮತ್ತು ವಾಹನಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಗುತ್ತಿತ್ತು.
ಈ ವೇಳೆ, ತಲೆಗೆ ಕ್ಯಾಪ್ ಧರಿಸಿ, ಪೊಲೀಸರ ಕಣ್ಣಿಗೆ ಮಣ್ಣೆರಚಿ ಗುರುತು ಸಿಗದಂತೆ ಬಸ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಸಂತೋಷ ಎಂಬ ಓರ್ವ ಸಜಾ ಕೈದಿಯನ್ನು ಬೀದರ್ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿ ಕಲಬುರಗಿ ಪೊಲೀಸರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಧ್ಯ ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.ಹುಮನಾಬಾದ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಡ್ರೋನ್ ಹಂಟಿಂಗ್:
ಬಂಧಿತ ಕೈದಿಯಿಂದ ಲಭ್ಯವಾದ ಸುಳಿವು ಹಾಗೂ ಖಚಿತ ಮಾಹಿತಿಯ ಮೇರೆಗೆ, ಪರಾರಿಯಾಗಿರುವ ಇನ್ನುಳಿದ ಇಬ್ಬರು ಕೈದಿಗಳು ಹುಮನಾಬಾದ್ ಪಟ್ಟಣದ ಕೈಗಾರಿಕಾ ಪ್ರದೇಶದ (Industrial Area) ಸುತ್ತಮುತ್ತಲಿನ ನಿರ್ಜನ ಪ್ರದೇಶ ಅಥವಾ ಕಾರ್ಖಾನೆಗಳಲ್ಲಿ ಅಡಗಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಬೃಹತ್ ಸರ್ಚ್ ಆಪರೇಷನ್, ಜಂಟಿ ಪೊಲೀಸರಿಂದ ಕಾರ್ಯಾಚರಣೆ :
ದಟ್ಟವಾದ ಪೊದೆಗಳು, ಕೈಗಾರಿಕಾ ಕಟ್ಟಡಗಳ ಮೇಲ್ಛಾವಣಿ ಹಾಗೂ ಮಾನವ ಸಂಚಾರ ವಿರಳವಾಗಿರುವ ಜಾಗಗಳ ಮೇಲೆ ನಿಗಾ ಇಡಲು ಹಗಲುರಾತ್ರಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಶಂಕಿತರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಪರಾರಿಯಾದ ಇಬ್ಬರು ಸಜಾ ಕೈದಿಗಳು ಯಾವುದೇ ಕ್ಷಣದಲ್ಲಾದರೂ ಸಿಕ್ಕಿಬೀಳಲಿದ್ದಾರೆ. ತಾಂತ್ರಿಕ ವಿಶ್ಲೇಷಣೆ ಹಾಗೂ ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸಾರ್ವಜನಿಕರು ಯಾವುದೇ ಶಂಕಿತ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕಲಬುರಗಿ ಜೈಲಿನ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ತಪ್ಪಿಸಿಕೊಂಡ ಕೈದಿಗಳನ್ನು ಆದಷ್ಟು ಬೇಗ ಜೈಲು ಕಂಬಿಗಳ ಹಿಂದೆ ತಳ್ಳಲು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರ ನೇತೃತ್ವದಲ್ಲಿ ಜಾಲ ಬೀಸಿದೆ. ಎಸ್‌ಪಿ ನೇತೃತ್ವದ ಕಾರ್ಯಾಚರಣೆಯಲ್ಲಿ ಬೀದರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಹುಮನಾಬಾದ್ ಡಿಎಸ್‌ಪಿ ಮಡೋಳಪ್ಪ, ಕಲಬುರಗಿ ಡಿಎಸ್‌ಪಿ ಜೇಮ್ಸ್ ಸೇರಿದಂತೆ ಇನ್ನಿತರ ಅನೇಕರು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.