ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಆನೇಕಲ್‌ನಲ್ಲಿ 80,000 ಸಾಮರ್ಥ್ಯದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ರಾಜ್ಯ ಸರ್ಕಾರದ ನಿರ್ಧಾರವು ಪ್ರಾದೇಶಿಕ ತಾರತಮ್ಯದ ಪರಮಾವಧಿ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಭಾಗ್ಯರಾಜ ಸೊನ್ನದ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಂಗಳೂರಿಗೆ ಒಂದು ನ್ಯಾಯ, ಉತ್ತರ ಕರ್ನಾಟಕಕ್ಕೆ ಇನ್ನೊಂದು ನ್ಯಾಯವೇ ಎಂದು ಪ್ರಶ್ನಿಸಿರುವ ಅವರು, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಾಕುವ ನೀತಿ ಖಂಡನೀಯ. ಬೆಂಗಳೂರಿನಲ್ಲಿ ಈಗಾಗಲೇ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಇದೆ. ಆದರೆ, ವಿಜಯಪುರ, ಬಾಗಲಕೋಟ, ಹುಬ್ಬಳ್ಳಿ, ಕಲಬುರಗಿ ಜಿಲ್ಲೆಗಳಲ್ಲಿ ಒಂದೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಇಲ್ಲ. 2013ರಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವುದಾಗಿ ಕೆ.ಎಸ್.ಸಿ.ಎ ಘೋಷಿಸಿತ್ತು. 40 ಎಕರೆ ಜಾಗ ಗುರುತಿಸಲಾಗಿತ್ತು. ಆ ಭರವಸೆ ಹುಸಿಯಾಗಿದೆ. ಹುಬ್ಬಳ್ಳಿ-ಧಾರವಾಡ ಮತ್ತು ವಿಜಯಪುರದಲ್ಲಿ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ಇದೆ. ಇಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿದರೆ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಯಾಗಿ ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ಯೋಜನೆಗಳನ್ನು ರಾಜಧಾನಿ ಸುತ್ತಲೇ ಕೇಂದ್ರೀಕರಿಸುವುದರಿಂದ ಬೆಂಗಳೂರು ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ. ಆನೇಕಲ್‌ನಲ್ಲಿ ಉದ್ದೇಶಿತ ₹943 ಕೋಟಿ ವೆಚ್ಚದ ಕ್ರಿಕೆಟ್ ಸ್ಟೇಡಿಯಂ ಯೋಜನೆಯನ್ನು ತಕ್ಷಣ ರದ್ದುಪಡಿಸಬೇಕು. ವಿಜಯಪುರ ಅಥವಾ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕನಿಷ್ಠ 50,000 ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಬೇಕು. ಉತ್ತರ ಕರ್ನಾಟಕ ಕ್ರೀಡಾಗ್ರಾಮ ಸ್ಥಾಪಿಸಿ 27 ವಿವಿಧ ಕ್ರೀಡೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಐಪಿಎಲ್ ಮತ್ತು ಬಿಸಿಸಿಐ ಕ್ರಿಕೆಟ್ ಪಂದ್ಯಗಳನ್ನು ಉತ್ತರ ಕರ್ನಾಟಕಕ್ಕೂ ಹಂಚಿಕೆ ಮಾಡಬೇಕು. ಸರ್ಕಾರ ಕೂಡಲೇ ನಮ್ಮ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಬೇಕು. ಬೇಡಿಕೆಗಳಿಗೆ ಸ್ಪಂದಿಸದೇ ಹೋದರೆ 13 ಜಿಲ್ಲೆಗಳಲ್ಲಿ ಸಹಿ ಸಂಗ್ರಹ, ರಸ್ತೆ ತಡೆ, ವಿಧಾನಸೌಧ ಚಲೋ ಸೇರಿದಂತೆ ಉಗ್ರ ಹೋರಾಟ ನಡೆಸುತ್ತೇವೆ.
-ಭಾಗ್ಯರಾಜ ಸೊನ್ನದ, ರಾಜ್ಯ ಸಂಘಟನಾ ಕಾರ್ಯದರ್ಶಿ, ಉತ್ತರ ಕರ್ನಾಟಕ ಹೋರಾಟ ಸಮಿತಿ