ಸಾರಾಂಶ
ಹುಲಿ ಸಂರಕ್ಷಿತ ಪ್ರದೇಶವಾದಲ್ಲಿ ಹಾಡಿಗಳಿಗೆ ಮೂಲಭೂತ ಸೌಲಭ್ಯ ಕೊರತೆ ಮತ್ತಷ್ಟು ಕಾಡುತ್ತದೆ. ಕಾಡಿನೊಳಗೆ ಜನ ಜಾನುವಾರು ಪ್ರವೇಶ ಮಾಡಲು ಆಗಲ್ಲ. ಮುಖ್ಯವಾಗಿ ನಮ್ಮ ಶ್ರೀ ಕ್ಷೇತ್ರದ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯಾಗಲಿದೆ.
ಕನ್ನಡಪ್ರಭ ವಾರ್ತೆ, ಹನೂರು
ಮಲೆ ಮಹದೇಶ್ವರ ಅಭಯಾರಣ್ಯ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವ ಕೈ ಬಿಟ್ಟು ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗವನ್ನೇ ಮುಂದುವರಿಸಬೇಕೆಂದು ಒಕ್ಕೊರಲ ಜನಾಭಿಪ್ರಾಯ ವ್ಯಕ್ತವಾಯಿತು.ಪಟ್ಟಣದ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಹಾಗೂ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಕೊಳ್ಳೇಗಾಲ ಹನೂರು ಬಫರ್ ವಲಯ ವತಿಯಿಂದ ಹಮ್ಮಿಕೊಂಡಿದ್ದ ಜನಾಭಿಪ್ರಾಯ ಸಭೆಯಲ್ಲಿ ಭಾಗವಹಿಸಿದ್ದ ಜನರು ಒಕ್ಕೊರಲಿನಿಂದ ಹುಲಿ ಸಂರಕ್ಷಿತ ಪ್ರದೇಶ ಪ್ರಸ್ತಾವಕ್ಕೆ ಆಕ್ಷೇಪಿಸಿದರು.
ಡಿಸಿಎಫ್ ಭಾಸ್ಕರ್ ಮಾತನಾಡಿ, ಮಲೆ ಮಹದೇಶ್ವರ ವನ್ಯಜೀವಿ ಭಾಗವನ್ನು ಸರ್ಕಾರದ ಹಂತದಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವವಿದೆ. ಇದೀಗ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಆಗಬಾರದು ಎಂದು ಅಭಿಪ್ರಾಯ ವ್ಯಕ್ತವಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.ಜನಾಭಿಪ್ರಾಯ: ಹುಲಿ ಸಂರಕ್ಷಿತ ಪ್ರದೇಶವಾದಲ್ಲಿ ಹಾಡಿಗಳಿಗೆ ಮೂಲಭೂತ ಸೌಲಭ್ಯ ಕೊರತೆ ಮತ್ತಷ್ಟು ಕಾಡುತ್ತದೆ. ಕಾಡಿನೊಳಗೆ ಜನ ಜಾನುವಾರು ಪ್ರವೇಶ ಮಾಡಲು ಆಗಲ್ಲ. ಮುಖ್ಯವಾಗಿ ನಮ್ಮ ಶ್ರೀ ಕ್ಷೇತ್ರದ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯಾಗಲಿದೆ.ಕಾಡಿನೊಳಗೆ ಇರುವ ಅನೇಕ ದೇವಾಲಯಗಳಿಗೆ ಪ್ರವೇಶ ನಿರಾಕರಿಸಿದಂತಾಗುತ್ತದೆ. ಹಳ್ಳಿಗಳ ಎತ್ತಂಗಡಿ ಆಗುತ್ತದೆ. ಕಿರು ಉತ್ಪನ್ನಗಳ ಸಂಗ್ರಹಣೆಗೆ ಅನಾನುಕೂಲ ಉಂಟಾಗುತ್ತದೆ ಎಂದು ಸಮಸ್ಯೆಗಳ ಸುರಿಮಳೆಗರೆದರು.
ಶಾಸಕ ಎಂ .ಆರ್. ಮಂಜುನಾಥ್ ಮಾತನಾಡಿ, ಹುಲಿ ಸಂರಕ್ಷಿತ ಪ್ರದೇಶ ಬೇಡ ಎಂಬುದೇ ಎರಡು ಸಭೆಗಳಲ್ಲಿ ಕಂಡು ಬಂದಿದೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕರು ಕೃಷಿ ಮತ್ತು ಹೈನುಗಾರಿಕೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಜನ ಗುಳೆ ಹೋಗಿದ್ದಾರೆ. ಹುಲಿಧಾಮವಾದರೆ ಇಂತಹ ಚಟುವಟಿಕೆ ಕುಂಠಿತ ವಾಗುತ್ತದೆ. ಜನರು ಬದುಕು ಕಟ್ಟಿಕೊಳ್ಳಲು ತೊಂದರೆಯಾಗುತ್ತದೆ. ಹಾಗಾಗಿ ತಾವು ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಬೇಕಾದಲ್ಲಿ ಹುಲಿಗಳನ್ನು ರಕ್ಷಣೆ ಮಾಡಲು ಬೇರೆ ಮಾರ್ಗ ಅನುಸರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಆಗಬಾರದು. ಬೇಕಾದರೆ ನಾವು ಮತ್ತು ಪ್ರಾಣಿಗಳು ಒಟ್ಟಿಗೆ ಸಹಬಾಳ್ವೆ ಮಾಡುವ ಮಾರ್ಗದರ್ಶನ ನೀಡಿ. ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.
ಬುಡಕಟ್ಟು ಸಮುದಾಯದ ಜಿಲ್ಲಾ ಸಂಘದ ಕಾರ್ಯದರ್ಶಿ ಡಾ. ಸಿ ಮಾದೇಗೌಡ, ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಾಧಿಕಾರದ ಕಾರ್ಯದರ್ಶಿ ರಘು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಡಿಸಿಎಫ್ ಭಾಸ್ಕರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಿಂದ್ಯಾ, ಎಸಿಎಫ್ ವಿರಾಜ್, ಹನೂರು ಬಫರ್ ವಲಯ ಅರಣ್ಯ ಅಧಿಕಾರಿ ನಾಗರಾಜು, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್ ಹಾಗೂ ವಿವಿಧ ರೈತ ಸಂಘದ ಪದಾಧಿಕಾರಿಗಳು ಹಾಗೂ ಸೋಲಿಗ ಅಭಿವೃದ್ಧಿ ಸಂಘದ ಪದಾಧಿಕಾರಿಗಳು, ಸ್ಥಳೀಯ ನಿವಾಸಿಗಳು, ಇನ್ನಿತರರು ಇದ್ದರು.
)
;Resize=(128,128))
;Resize=(128,128))