ಶರಾವತಿ ಬೆಂಗಳೂರಿಗೆ ಒಯ್ಯುವ ಯೋಜನೆ ಕೈಬಿಡಿ: ಲಿಂಗಾಯತ ಮಹಾಸಭಾ ಆಗ್ರಹ

| Published : Sep 01 2024, 01:45 AM IST

ಶರಾವತಿ ಬೆಂಗಳೂರಿಗೆ ಒಯ್ಯುವ ಯೋಜನೆ ಕೈಬಿಡಿ: ಲಿಂಗಾಯತ ಮಹಾಸಭಾ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಸುಮಾರು 400 ಕಿ.ಮೀ. ಆಗಲಿದೆ. ಇಷ್ಟು ದೂರ ನೀರು ಒಯ್ಯುವುದು ವೈಜ್ಞಾನಿಕವಲ್ಲ, ಇಂತಹ ಯೋಜನೆಯಿಂದ ಯಾರಿಗೂ ಲಾಭವಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಭಿಪ್ರಾಯಟ್ಟಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಅವೈಜ್ಞಾನಿಕ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಸುಮಾರು 400 ಕಿ.ಮೀ. ಆಗಲಿದೆ. ಇಷ್ಟು ದೂರ ನೀರು ಒಯ್ಯುವುದು ವೈಜ್ಞಾನಿಕವಲ್ಲ, ಇಂತಹ ಯೋಜನೆಯಿಂದ ಯಾರಿಗೂ ಲಾಭವಿಲ್ಲ, ದಟ್ಟಕಾಡಿನ ನಡುವೆ 350 ಎಕರೆ ಜಾಗದಲ್ಲಿ ಪಂಪ್ಡ್‌ ಸ್ಟೋರೆಜ್ ಮಾಡಿ ವಿದ್ಯುತ್ ಉತ್ಪಾದಿಸುವುದು, ನದಿ ನೀರನ್ನು ಕೊಳವೆ ಮೂಲಕ 400 ಕಿ.ಮೀ. ಹರಿಸುವಂತಹ ಯೋಜನೆ ಗಳು ಪ್ರಪಂಚದ ಯಾವುದೇ ಮೂಲೆಯಲ್ಲೂ ಇಲ್ಲ, ಅದರಲ್ಲೂ ಮಲೆನಾಡಿನ ಹಳ್ಳಿಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್‌ನಲ್ಲಿ ನೀರು ಕೊಡುವ ಸ್ಥಿತಿ ಇರುವಾಗ ಮತ್ತೇಕೆ ಇಂತಹ ಬೃಹತ್ ಯೋಜನೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಕೇವಲ 137 ಕಿ.ಮೀ. ಹರಿವು ಇರುವ ಇಷ್ಟು ಚಿಕ್ಕನದಿಯ ಮೇಲೆ ಆಗಿರುವ ದೌರ್ಜನ್ಯ ಪ್ರಪಂಚದ ಬೇರೆ ಯಾವುದೇ ನದಿಯ ಮೇಲೂ ಆಗಿಲ್ಲ. ಇದೊಂದು ಹಾಸ್ಯಾಸ್ಪದ ಯೋಜನೆಯಾಗಿದೆ. ಹಿರೇಭಾಸ್ಕರ್ ಅಣೆಕಟ್ಟು ನಿರ್ಮಿಸಿದ್ದರಿಂದ ಹೊನ್ನಾವರದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ನದಿ ನೀರು ಸಮುದ್ರ ಸೇರುವುದು ಕಡಿಮೆಯಾದಲ್ಲಿ 15 ಕಿ.ಮೀ.ವರೆಗೆ ಉಪ್ಪು ನೀರು ನುಗ್ಗು ತ್ತದೆ. ಅಲ್ಲಿನ ಜೀವ ವೈವಿಧ್ಯವೇ ಹಾಳಾಗುತ್ತದೆ. ಹಲವು ತಜ್ಞರು ಶರಾವತಿ ನೀರು ತಿರುವು ಅವೈಜ್ಞಾನಿಕ ಎಂದು ಹೇಳಿದ್ದರೂ ಸರ್ಕಾರ ಮತ್ತೆ ಯೋಜನಾ ವರದಿ ರೂಪಿಸುತ್ತಿದೆ ಎಂದು ಆರೋಪಿಸಿದರು.

೨೫ ಸಾವಿರ ಕೋಟಿ ರು. ವೆಚ್ಚ ಮಾಡಿ ಶರಾವತಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವುದು ಏನೂ ಸಾಧಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿರುವ ನೀರನ್ನು ಸದ್ಬಳಕೆ ಮಾಡಿಕೊಂಡರೆ ಸಾಕು. ಈ ಅವೈಜ್ಞಾನಿಕ ಯೋಜನೆ ಜಾರಿಯಾದರೆ ಜಿಲ್ಲೆಯಾದ್ಯದಂತ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲೂಕು ಪ್ರಧಾನ ಕಾರ್ಯದರ್ಶಿ ಸೋಮನಾಥ್ ಕೆ.ಆರ್., ಮಾಜಿ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಪ್ರಮುಖರಾದ ಎನ್.ಪರಮೇಶ್ವರಪ್ಪ, ಮಲ್ಲಿಕಾರ್ಜುನ ಕಾನೂರು, ಪುಷ್ಪವತಿ, ಬಳ್ಳಕೆರೆ ಸಂತೋಷ್, ಸ್ವಾಮಿ, ಶಂಕರಪ್ಪ, ಬಸಪ್ಪ, ಸುಕುಮಾರ್, ರಾಜಶೇಖರ, ಸುಧಾ ಮತ್ತಿತರರಿದ್ದರು.