ಅತಿಥಿ ಶಿಕ್ಷಕರಿಂದ ಶಾಲೆ ತೊರೆಯುವ ಅಭಿಯಾನ: ಎಚ್ಚರಿಕೆ

| Published : Oct 23 2024, 12:42 AM IST / Updated: Oct 23 2024, 12:43 AM IST

ಸಾರಾಂಶ

ಕನಕಪುರ: ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಕೂಡಲೇ ಗೌರವ ಧನ ಬಿಡುಗಡೆ ಮಾಡದಿದ್ದರೆ ಅತಿಥಿ ಶಿಕ್ಷಕರು ಶಾಲೆ ತೊರೆಯುವ ಅಭಿಯಾನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.

ಕನಕಪುರ: ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಕೂಡಲೇ ಗೌರವ ಧನ ಬಿಡುಗಡೆ ಮಾಡದಿದ್ದರೆ ಅತಿಥಿ ಶಿಕ್ಷಕರು ಶಾಲೆ ತೊರೆಯುವ ಅಭಿಯಾನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತಿಗೌಡ ಅವರಿಗೆ ಮನವಿ ಸಲ್ಲಿಸಿ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಶಿವ ಮಾತನಾಡಿ, ಶಾಲೆಗಳು ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿದೆ. ತಾಲೂಕಿನಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಇನ್ನೂ ವೇತನ ನೀಡಿಲ್ಲ. ಇದರಿಂದ ಅತಿಥಿ ಶಿಕ್ಷಕರು ತುಂಬಾ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಕೊಡುವ ವೇತನವನ್ನೇ ನಂಬಿಕೊಂಡು ನೂರಾರು ಶಿಕ್ಷಕರು ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೂನ್‌ನಿಂದ ಶಾಲೆಗಳು ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದರೂ ಸಹ ವೇತನ ಬಿಡುಗಡೆಯಾಗಿಲ್ಲ. ಇದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರು ಕುಟುಂಬದ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಅತಿಥಿ ಶಿಕ್ಷಕರಿಗೆ ವೇತನ ಬಿಡುಗಡೆಯಾಗಿದೆ. ನಮ್ಮ ತಾಲೂಕಿನಲ್ಲಿ ಮಾತ್ರ ಇನ್ನು ವೇತನ ಬಿಡುಗಡೆಯಾಗಿಲ್ಲ. ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಾಲೂಕಿನ ಅತಿಥಿ ಶಿಕ್ಷಕರಿಗೆ ಕೂಡಲೇ ವೇತನ ಬಿಡುಗಡೆ ಮಾಡದಿದ್ದರೆ ಶಾಲೆ ತೊರೆಯುವ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾದರೆ ನಾವು ಹೊಣೆಗಾರರಲ್ಲ ಎಂದು ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತಿಗೌಡ ಮಾತನಾಡಿ, ನಾನು ಈಗಷ್ಟೇ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಂದಿದ್ದೇನೆ. ನನಗೆ ಸ್ವಲ್ಪ ಕಾಲಾವಕಾಶ ಕೊಡಿ ಅತಿಥಿ ಶಿಕ್ಷಕರು ವೇತನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿ ಆದಷ್ಟೂ ಬೇಗ ವೇತನ ದೊರೆಯುವಂತೆ ಮಾಡುವ ಭರವಸೆ ನೀಡಿದರು.

ಈ ವೇಳೆ ಅತಿಥಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ರುದ್ರೇಶ್, ಗೌರವಾಧ್ಯಕ್ಷ ಜಯರಾಮು, ಕಾರ್ಯದರ್ಶಿ ರೇಣುಕಾ, ಖಜಾಂಚಿ ಕುಮಾರ್ ನಾಯಕ್, ಪದಾಧಿಕಾರಿಗಳಾದ ಅರ್ಜುನ್, ಹಳ್ಳಿ ಕುಮಾರ ನಾಯಕ್, ಶಿವ ಬೀರಯ್ಯ, ಶಿವಮಾದು, ತ್ಯಾಗರಾಜು, ಜಗದೀಶ್, ಮಹೇಶ್, ದೊಡ್ಡಯ, ಜಂಬೀರಯ್ಯ, ಪ್ರೇಮ, ಸುಶ್ಮಿತಾ ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದಲ್ಲಿ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ವೇತನ ನೀಡದಿದ್ದರೆ ಅತಿಥಿ ಶಿಕ್ಷಕರು ಶಾಲೆ ತೊರೆಯುವ ಅಭಿಯಾನ ಹಮ್ಮಿಕೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.