ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮಾಜದ ನಾಯಕ ಮಂಕಾಳ ವೈದ್ಯ ಅವರ ಹೆಸರನ್ನು ಸಚಿವರ ಪಟ್ಟಿಯಲ್ಲಿ ಪ್ರಕಟಿಸಿ, ಕೆಲವೇ ಕ್ಷಣಗಳಲ್ಲಿ ಕೈಬಿಡಲಾಗಿದೆ. ಇದು ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಜಿಲ್ಲಾ ಗಂಗಾಮತಸ್ಥ ಸಮಾಜದ ಗೌರವಾಧ್ಯಕ್ಷ ಮಂಜುನಾಥ ಭೋವಿ ಹೇಳಿದರು.

ಹಾವೇರಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮಾಜದ ನಾಯಕ ಮಂಕಾಳ ವೈದ್ಯ ಅವರ ಹೆಸರನ್ನು ಸಚಿವರ ಪಟ್ಟಿಯಲ್ಲಿ ಪ್ರಕಟಿಸಿ, ಕೆಲವೇ ಕ್ಷಣಗಳಲ್ಲಿ ಕೈಬಿಡಲಾಗಿದೆ. ಇದು ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಜಿಲ್ಲಾ ಗಂಗಾಮತಸ್ಥ ಸಮಾಜದ ಗೌರವಾಧ್ಯಕ್ಷ ಮಂಜುನಾಥ ಭೋವಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಕಾಲ ಮಿಂಚಿಲ್ಲ, ಶಾಸಕ ಮಂಕಾಳ ವೈದ್ಯ ಹಾಗೂ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕೋವಿ, ಕಬ್ಬಲಿಗ, ಗಂಗಾಮತ, ಸುಣಗಾರ, ಮೊಗವೀರ, ಮೊಗೇರ ಎಂಬ ಉಪ ಪಂಗಡಗಳಿರುವ ಗಂಗಾಮತಸ್ಥ ಸಮಾಜದಲ್ಲಿ 45 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದೇವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ ಸಾಮಾಜಿಕ ನ್ಯಾಯದಡಿ ಮಂತ್ರಿಸ್ಥಾನ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಗಂಗಾಮತ ಸಮಾಜದ ನಾಯಕನ ಹೆಸರು ಕೈಬಿಡಲಾಗಿದೆ. ಸಿಎಂ ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹಾಗೂ ಹೈಕಮಾಂಡ್‌ ನಾಯಕರು ಈ ಕೂಡಲೇ ಸಮಾಜದ ನಾಯಕ, ಶಾಸಕ ಮಂಕಾಳ ವೈದ್ಯ ಹಾಗೂ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದರೆ ಮುಂಬರುವ ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶೀಘ್ರದಲ್ಲಿ ರಾಜ್ಯ ಮುಖಂಡರು ಹಾಗೂ ಅಂಬಿಗರ ಗುರುಪೀಠದ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್‌ ಯಾರದೋ ಒತ್ತಡಕ್ಕೆ ಮಣಿದು ಮಾಜಿ ಸಚಿವ ಮಂಕಾಳ ವೈದ್ಯ ಅವರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು, ಸಮಾಜಕ್ಕೆ ಅಗೌರವ ತಂದಿದ್ದಾರೆ. ಸರ್ಕಾರದ ಮೇಲೆ ಇನ್ನೂ ವಿಶ್ವಾಸವಿದ್ದು, ಜಾತಿ ತಾರತಮ್ಯ ಸರಿಪಡಿಸುವ ನಂಬಿಕೆ ಇದೆ. ಮಂಕಾಳ ವೈದ್ಯ ಹಾಗೂ ತಿಪ್ಪಣ್ಣಪ್ಪ ಕಮಕನೂರ ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡದಿದ್ದರೆ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಸರ್ಕಾರದ ವಿರುದ್ಧ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಶಂಕರ ಸುತಾರ, ಬಸವರಾಜ ಕಳಸೂರ, ಕರಬಸಪ್ಪ ಹಳದೂರ, ಕೃಷ್ಣಮೂರ್ತಿ ವಡ್ನಿಕೊಪ್ಪ, ಅಣ್ಣಪ್ಪ ಚಾಕಾಪುರ, ಚಂದ್ರಶೇಖರ ಜಾಡರ, ನಿಂಗಣ್ಣ ಹೆಗ್ಗಣ್ಣವರ, ದೇವರಾಜ ಸುಣಗಾರ, ಜಿತೇಂದ್ರ ಸುಣಗಾರ, ಕುಬೇರ ಬೆಳವಲಕೊಪ್ಪ, ಪ್ರಕಾಶ ಅಂಬಿಗೇರ ಇದ್ದರು.